ತುಮಕೂರು: ಚಿಕ್ಕನಾಯಕನಹಳ್ಳಿ ವೈದ್ಯರು ಬರೆದ ಕನ್ನಡ ಪ್ರಿಸ್ಕ್ರಿಪ್ಷನ್‌ ಎಷ್ಟು ಚೆಂದ!

Arun Kumar
0

ತುಮಕೂರು, ಸೆಪ್ಟೆಂಬರ್ 11: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ. ವೈದ್ಯರು ಸಹ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯತ್ತಿದೆ. ಕೆಲವು ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ್ದಾರೆ. ಈ ಕುರಿತ ಪೋಸ್ಟ್ಗಳು ಎಲ್ಲೆಡೆ ಹರಿದಾಡುತ್ತಿವೆ. ಈಗ ತುಮಕೂರು ವೈದ್ಯರೊಬ್ಬರು ಬರೆದ ಔಷಧ ಚೀಟಿ ಕನ್ನಡಿಗರ ಹೃದಯ ಗೆದ್ದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ದಂತ ವೈದ್ಯರಾದ ಡಾ. ಸಿ. ಜಿ. ಮಲ್ಲಿಕಾರ್ಜುನ್ ಬರೆದ ಔಷಧ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 09.09.2024ರಂದು ರೋಗಿಯೊಬ್ಬರಿಗೆ ಸಿ. ಜಿ. ಮಲ್ಲಿಕಾರ್ಜುನ್ ಔಷಧಿಯನ್ನು ಕನ್ನಡದಲ್ಲಿಯೇ ಬರೆದುಕೊಟ್ಟಿದ್ದಾರೆ.

ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಪ್ಷನ್ ಬರೆಯಬೇಕು ಎಂಬ ಕೂಗಿಗೆ ಈ ಚೀಟಿ ಮತ್ತಷ್ಟು ಬಲವನ್ನು ತುಂಬಿದೆ. ಡಾ. ಸಿ. ಜಿ. ಮಲ್ಲಿಕಾರ್ಜುನ್ ಬರೆದ ಔಷಧ ಚೀಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಹಂಚಿಕೊಂಡಿದ್ದಾರೆ. ವೈದ್ಯರ ಸುಂದರವಾದ ಕನ್ನಡವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಔಷಧ ಚೀಟಿ ವೈರಲ್: ಚಿಕ್ಕನಾಯಕನಹಳ್ಳಿಯ ಜಾಮಿಯಾ ಮಸೀದಿ ಕಾಂಪ್ಲೆಕ್ಸ್ನಲ್ಲಿರುವ ಮಹಿಮಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ. ಸಿ. ಜಿ. ಮಲ್ಲಿಕಾರ್ಜುನ್ ಮಾರಾ ನಾಯಕ ಎಂಬ ರೋಗಿಗೆ ಬರೆದುಕೊಟ್ಟ ಔಷಧ ಚೀಟಿ ವೈರಲ್ ಆಗಿದೆ.

ಎರಡು ಔಷಧಿಗಳನ್ನು ಬರೆದು ಕೊಟ್ಟಿರುವ ಡಾ. ಸಿ. ಜಿ. ಮಲ್ಲಿಕಾರ್ಜುನ್, ಅದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ಸಹ ಕನ್ನಡದಲ್ಲಿಯೇ ಬರೆದಿದ್ದಾರೆ. ಈ ಔಷಧ ಚೀಟಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಜನರು ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರು ನಗರದ ಕೆ. ವಿ. ಡೆಂಡಲ್ ಕ್ಲಿನಿಕ್ನ ವೈದ್ಯ ಡಾ. ಹರಿಪ್ರಸಾದ್ ಸಿ. ಎಸ್. ಬರೆದುಕೊಟ್ಟ ಕನ್ನಡ ಔಷಧಿ ಚೀಟಿ ಅಭಿಯಾನದ ಭಾಗವಾಗಿ ಎಲ್ಲಾ ಕಡೆ ಶೇರ್ ಆಗಿತ್ತು, ಇತರ ವೈದ್ಯರಿಗೆ ಮಾದರಿಯಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಇದನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿತ್ತು ಮತ್ತು ಪ್ರಾಧಿಕಾರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಕೆ ಮಾಡಿತ್ತು.

ಈಗಾಗಲೇ ರಾಜ್ಯದಲ್ಲಿ ಇನ್ನುಮುಂದೆ ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿಯನ್ನು ಬರೆಯಲು ಆದೇಶ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಮಾದರಿ ಅಭಿಯಾನಕ್ಕೆ ಚಾಲನೆಯೂ ಸಿಕ್ಕಿದೆ.

ಇಂತಹ ಸಂದರ್ಭದಲ್ಲಿಯೇ ಡಾ. ಸಿ. ಜಿ. ಮಲ್ಲಿಕಾರ್ಜುನ್ ಬರೆದಿರುವ ಕನ್ನಡ ಔಷಧಿ ಚೀಟಿ ವೈರಲ್ ಆಗಿದೆ. ವೈದ್ಯರ ಕೈ ಬರಹ ಚೆನ್ನಾಗಿರುವುದಿಲ್ಲ, ಅದು ಯಾರಿಗೂ ಅರ್ಥವಾಗುವುದಿಲ್ಲ ಎಂಬ ಜನರ ಕೊಂಕು ಮಾತಿನ ನಡುವೆಯೇ ಡಾ. ಸಿ. ಜಿ. ಮಲ್ಲಿಕಾರ್ಜುನ್ ಅವರ ಕನ್ನಡ ಬರವಣಿಗೆ ಜನರ ಹೃದಯ ತಲುಪಿದೆ.

ಆಗಸ್ಟ್ ಅಂತ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 384 ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ತಪ್ಪು ಕನ್ನಡ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. 40ಕ್ಕೂ ಅಧಿಕ ಪ್ರಶ್ನೆಗಳನ್ನು ಭಾಷಾಂತರ ಮಾಡುವಾಗ ಯಡವಟ್ಟು ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಪರೀಕ್ಷೆ ನಡೆಸಲು ಈಗಾಗಲೇ ಆದೇಶಿಸಿದ್ದಾರೆ. ಇಂತಹ ಹೊತ್ತಿನಲ್ಲಿಯೇ ವೈದ್ಯರ ಕನ್ನಡ ಔಷಧ ಚೀಟಿ ಕನ್ನಡಿಗ ಮನಸ್ಸು ಗೆದ್ದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)