Potholes: ಸಸ್ಪೆಂಡ್‌ ಭೀತಿ ಇದ್ದರೂ ರಸ್ತೆಗುಂಡಿ ಮುಕ್ತ ಬೆಂಗಳೂರು ಡೌಟ್‌!

Arun Kumar
0

Bangalore potholes: ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮತ್ತೊಮ್ಮೆ ಗಡುವು ನೀಡಿದ್ದಾರೆ. ಆದರೆ, ಈ ಗಡುವಿಗೆ ಇನ್ನು ಆರು ದಿನ ಮಾತ್ರ ಬಾಕಿ ಉಳಿದಿದೆ. ಈ ಅವಧಿಯ ಒಳಗಾಗಿ ನಗರದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚುವುದು ಡೌಟ್ ಎನ್ನಲಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಗಡುವು ನೀಡಲಾಗಿತ್ತಾದರೂ, ಆ ಅವಧಿಯ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚಿದ ಉದಾಹರಣೆ ಇಲ್ಲ.

ರಸ್ತೆಗುಂಡಿ ಮುಚ್ಚುವುದಕ್ಕೆ ಸೆಪ್ಟೆಂಬರ್ 15 ಲಾಸ್ಟ್; 6 ದಿನ ಬಾಕಿ
ಇನ್ನು ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಡೆಪ್ಯೂಟಿ ಸಿಎಂ ಗಡುವೇನೋ ಕೊಟ್ಟಿದ್ದಾರೆ. ಆದರೆ, ಈ ವಾರ ಗಣೇಶ ಚತುರ್ಥಿ ಹಾಗೂ ವಾರಂತ್ಯ ಸೇರಿದಂತೆ ವಿವಿಧ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬಿಬಿಎಂಪಿಯ ಬಹುತೇಕ ಕಾಮಗಾರಿಗಳು ನಿಂತಿದ್ದವು.

ಕಾಮಗಾರಿ ನಡೆಸುವ ಕಾರ್ಮಿಕರು ಸಹ ರಜೆಯಲ್ಲಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಇದೀಗ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಕೇವಲ ಆರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ಸಾವಿರಾರು ರಸ್ತೆಗುಂಡಿಗಳು ಸೃಷ್ಟಿಯಾಗಿವೆ. ಹೀಗಾಗಿ, ಇನ್ನೊಂದು ವಾರದಲ್ಲಿ ಇಷ್ಟು ರಸ್ತೆಗುಂಡಿಗಳನ್ನು ಮುಚ್ಚುವುದು ಅನುಮಾನ ಎಂದೇ ಹೇಳಲಾಗಿದೆ.

ನಗರದ ವಿವಿಧ ಭಾಗದಲ್ಲಿ ಮಳೆ ವಾತಾವರಣ
ಇನ್ನು ಕರ್ನಾಟಕದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ. ಅಲ್ಲದೇ ವಿವಿಧ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಬೆಂಗಳೂರಿನಲ್ಲಿ ಮಳೆ ಪ್ರಾರಂಭವಾದರೆ, ರಸ್ತೆಗುಂಡಿಗಳನ್ನು ಮುಚ್ಚುವುದು ಸವಾಲಾಗಲಿದೆ. ಅಲ್ಲದೇ ನಗರದಲ್ಲಿ ಮೆಟ್ರೋ, ಜಲ ಮಂಡಳಿ ಹಾಗೂ ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಿಂದ ನೂರಾರು ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿದೆ.

ಈ ಭಾಗದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕಾದರೆ, ಈ ಇಲಾಖೆಗಳು ಸಹ ಸಹಕಾರ ನೀಡಬೇಕಾಗುತ್ತದೆ. ಜನ ಸಂಚಾರ ಹೆಚ್ಚಾಗಿರುವ ಭಾಗಗಳಲ್ಲೇ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು. ಇದನ್ನು ಕಾಲಮಿತಿಯಲ್ಲಿ ಮುಚ್ಚುವ ಸವಾಲು ಬಿಬಿಎಂಪಿಯ ಮುಂದಿದೆ.

ಕಳಪೆ ಕಾಮಗಾರಿ ಆಗುವ ಅಪಾಯ
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾಲಮಿತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚದೆ ಇದ್ದರೆ, ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡುವುದಾಗಿಯೂ, ಅವರನ್ನು ಸಸ್ಪೆಂಡ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇದರಿಂದ ರಸ್ತೆಗುಂಡಿಗಳನ್ನು ಮುಚ್ಚುವ ಅವಸರದಲ್ಲಿ ಕಳಪೆ (ಉದ್ದೇಶಪೂರ್ವಕವಲ್ಲ) ಕಾಮಗಾರಿ ಆಗುವ ಸಾಧ್ಯತೆ ಇದೆ. ರಸ್ತೆಗುಂಡಿಗಳನ್ನು ಮುಚ್ಚುವ ಮುನ್ನ ಆ ನಿರ್ದಿಷ್ಟ ಪ್ರದೇಶವನ್ನು ಸ್ವಚ್ಛ ಮಾಡಬೇಕು.

ಅಗೆಯಬೇಕು ಹಾಗೂ ದೊಡ್ಡ ಜಲ್ಲಿಕಲ್ಲನ್ನು ಬಳಸಬೇಕು ಎನ್ನುವುದು ಸೇರಿದಂತೆ ವಿವಿಧ ನಿಯಮಗಳಿವೆ. ಆದರೆ, ಬೇಗ ಬೇಗ ರಸ್ತೆಗುಂಡಿಗಳನ್ನು ಮುಚ್ಚಬೇಕು ಎನ್ನುವ ಅವಸರದಲ್ಲಿ ನಿಯಮಗಳನ್ನು ಸಡಿಲ ಮಾಡಿ, ರಸ್ತೆಗುಂಡಿಗಳನ್ನು ಮುಚ್ಚಿದರೆ, ಇನ್ನೊಂದು 15 ದಿನಗಳಲ್ಲಿ ಮತ್ತೆ ರಸ್ತೆಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಪ್ರತಿ ವರ್ಷವೂ ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಸೃಷ್ಟಿಯಾಗುತ್ತವೆ. ಈ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿಯು ವಿಶೇಷ ತಂಡ ರಚನೆ ಮಾಡುವುದು ಹಾಗೂ ರಸ್ತೆಗುಂಡಿ ಮುಚ್ಚುವುದಕ್ಕೆ ಗುಡುವು ನಿಗದಿ ಮಾಡುವುದು ಸಾಮಾನ್ಯ. ಆದರೆ, ಇಲ್ಲಿಯವರೆಗೆ ಗಡುವಿನ ಅವಧಿಯ ಒಳಗಾಗಿ ರಸ್ತೆಗುಂಡಿಗಳನ್ನು ಮುಚ್ಚಿದ ಉದಾಹರಣೆ ಇಲ್ಲ. ಹೀಗಾಗಿ, ಈ ಬಾರಿಯ ಗಡುವು ಸಹ ಅದೇ ಆಗಲಿದೆ ಎನ್ನಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)