Raichur: 2 ಎಕರೆ ಜಮೀನಿನಲ್ಲಿ ತೋಟಗಾರಿಕೆ, ಮೀನುಗಾರಿಕೆ: ಮಾದರಿ ಯುವಕ

Arun Kumar
0

ರಾಯಚೂರು ಮೇ 21: ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದ ಜಮೀನಿನಲ್ಲಿ ಮೀನುಗಾರಿಕೆ, ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಯುವಕ ಸೈಯದ್ ಅಕ್ರಮ್ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತೊಗರಿ, ಹತ್ತಿ ಬೆಳೆಯಲಾಗುತ್ತಿದ್ದ ಸೈಯದ್ ಅಕ್ರಮ್ ಅವರ ಜಮೀನು ಈಗ ಪಪ್ಪಾಯಿ ತೋಟವಾಗಿ ಕಂಗೊಳಿಸುತ್ತಿದೆ. ಸೈಯದ್ ಅಕ್ರಮ್ ತಮ್ಮ ಒಟ್ಟು 15ಎಕರೆ ಜಮೀನಿನ ಪೈಕಿ ಎರಡು ಎಕರೆ ಜಮೀನಿನಲ್ಲಿ ತೋಟಗಾರಿಕೆ ಹಾಗೂ ಮೀನುಗಾರಿಕೆ ಆರಂಭಿಸಿದ್ದಾರೆ.

ಸೈಯದ್ ಅಕ್ರಮ್ ಮೂಲತಃ ಗೋವಾದಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಹೋಟೆಲ್ ಮತ್ತು ರೆಸಾರ್ಟ್ ಗಳ ನಿರ್ವಹಣೆ ಗುತ್ತಿಗೆ, ಪ್ರವಾಸೋದ್ಯಮ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಸ್ವಗ್ರಾಮಕ್ಕೆ ಮರಳಿದ್ದರು. ಕಳೆದ ವರ್ಷ ತಮ್ಮ ಎರಡು ಎಕರೆ ಜಮೀನಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸಾಮಾಗ್ರಿ ಹಾಗೂ ಕೂಲಿ ವೆಚ್ಚ ಪಡೆದು 1,200 ಪಪ್ಪಾಯಿ ಸಸಿಗಳನ್ನು ನೆಡುವ ಮೂಲಕ ತೋಟಗಾರಿಕೆ ಬೇಸಾಯ ಆರಂಭಿಸಿದ್ದರು.

ತೋಟಗಾರಿಕೆ ಇಲಾಖೆಯ ನೆರವಿನಿಂದ ಹನಿ ನೀರಾವರಿ ಸೌಲಭ್ಯ ಮತ್ತು ಸ್ವಂತ ಕೊಳವೆ ಬಾವಿಯಿಂದ ನೀರು ಪಡೆದು ಈಗ ಸಮೃದ್ಧವಾದ ಪಪ್ಪಾಯಿ ಹಣ್ಣುಗಳನ್ನು ಬೆಳೆದಿದ್ದಾರೆ. 'ಈ ವರ್ಷ ಬೇಸಿಗೆಯ ಅತಿಯಾದ ತಾಪಮಾನ, ಈಚೆಗೆ ಸುರಿದ ಮಳೆ, ಗಾಳಿಯಿಂದಾಗಿ ಪಪ್ಪಾಯಿ ಹಣ್ಣು ಮತ್ತು ಗಿಡಗಳು ಹಾನಿಗೀಡಾಗಿವೆ. ಸುಮಾರು10-15ಟನ್ ಫಸಲು ಬರುವ ನಿರೀಕ್ಷೆಯಿದೆ' ಎಂದು ಸೈಯದ್ ಅಕ್ರಮ್ ಹೇಳುತ್ತಾರೆ.

ಒಂದು ಸಾವಿರ ಚದುರ ಅಡಿಯ ಕೆರೆ ನಿರ್ಮಿಸಿ ರೂಪ್ ಚಂದ್ ತಳಿಯ ಮೀನುಗಳನ್ನು ಸಾಕಿ ಮೀನುಗಾರಿಕೆಯನ್ನು ಅವರು ಆರಂಭಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಿಶ್ರ ಬೆಳೆ ಬೇಸಾಯದ ಮೂಲಕ ಮಾವು, ಡ್ರ್ಯಾಗನ್ ಫ್ರೂಟ್, ಸೇಬು , ಬಟರ್ ಫ್ರೂಟ್ ಬೆಳೆಯುವ ಉದ್ದೇಶ ಹೊಂದಿದ್ದಾರೆ. ಕುರಿ ಹಾಗೂ ಕೋಳಿ ಸಾಕಾಣಿಕೆ ಜೊತೆಗೆ ಹದಿನೈದು ಎಕರೆ ಜಮೀನಿನಲ್ಲಿ ಕೃಷಿ ಪ್ರವಾಸೋದ್ಯಮ ಕೇಂದ್ರ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಸೈಯದ್ ಅಕ್ರಮ್ ಹೇಳುತ್ತಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಇಂತಹ ಯುವಕರಿಗೆ ಹೆಚ್ಚಿನ ನೆರವು, ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂಬುದು ಸ್ಥಳೀಯರ ಮನವಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)