ಮಂಡ್ಯ, ಮೇ 17: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಈಗ ಗೊಂದಲದ ಗೂಡಾಗಿದೆ. ಒಂದೆಡೆ ಬಿಜೆಪಿ ಪಕ್ಷ ಈ.ಸಿ.ನಿಂಗರಾಜ್ಗೌಡರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಜೆಡಿಎಸ್ ವರಿಷ್ಠರು ಕೆ.ವಿವೇಕಾನಂದ ಅವರಿಗೆ ಪಕ್ಷದ ಬಿ-ಫಾರಂ ನೀಡಿರುವುದು ಅಚ್ಚರಿ ಮೂಡಿಸಿದೆ. ಇದೀಗ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿ ಎರಡು ಬಾರಿ ಗೆಲುವು ಸಾಧಿಸಿದ್ದ ಕೆ.ಟಿ.ಶ್ರೀಕಂಠೇಗೌಡರು ಈ ಬಾರಿ ಜೆಡಿಎಸ್ ಪಕ್ಷದಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದರು. ಚುನಾವಣೆಗೆ ಸಾಕಷ್ಟು ಪೂರ್ವ ತಯಾರಿ ನಡೆಸುವುದರೊಂದಿಗೆ ಪಕ್ಷದ ಟಿಕೆಟ್ಗೆ ತೀವ್ರ ಪೈಪೋಟಿ ನಡೆಸಿದ್ದರು. ಶ್ರೀಕಂಠೇಗೌಡರ ಶಿಷ್ಯರಾಗಿ ಅವರ ಗರಡಿಯಲ್ಲೇ ಪಳಗಿದ್ದ ಕೆ.ವಿವೇಕಾನಂದ ಕೂಡ ಜೆಡಿಎಸ್ ಅಭ್ಯರ್ಥಿಯಾಗುವುದಕ್ಕೆ ಹೋರಾಟ ನಡೆಸಿದ್ದರು. ಅಂತಿಮವಾಗಿ ಜೆಡಿಎಸ್ ವರಿಷ್ಠರಿಂದ ಬಿ-ಫಾರಂ ಪಡೆದುಕೊಂಡಿರುವ ಕೆ.ವಿವೇಕಾನಂದ ಅವರು ಗುರುವಿಗೇ ತಿರುಮಂತ್ರ ಹಾಕಿದಂತಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಲು ಕೆ.ಟಿ.ಶ್ರೀಕಂಠೇಗೌಡ ಮತ್ತು ಕೆ.ವಿವೇಕಾನಂದ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿಧಾನಪರಿಷತ್ತಿನ ಉತ್ತಮ ಶಾಸಕ ಪ್ರಶಸ್ತಿ ಪಡೆದುಕೊಂಡು, ಉತ್ತಮ ವಾಗ್ಮಿ ಎನಿಸಿದ್ದ ಕೆ.ಟಿ.ಶ್ರೀಕಂಠೇಗೌಡರಿಗೆ ಅವಕಾಶ ತಪ್ಪಿಸಿರುವ ದಳಪತಿಗಳು ಕೆ.ವಿವೇಕಾನಂದ ಅವರಿಗೆ ಮಣೆ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸುವಂತೆ ಮಾಡಿದೆ. ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ನೀಡದಿರುವುದಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.
ಜೆಡಿಎಸ್ ಅಥವಾ ಮೈತ್ರಿ ಅಭ್ಯರ್ಥಿಯಾಗುವ ನಿರೀಕ್ಷೆಯೊಂದಿಗೆ ಕಳೆದೊಂದು ವರ್ಷದಿಂದ ಚುನಾವಣಾ ಕಾರ್ಯಚಟುವಟಿಕೆಯಲ್ಲಿ ಕೆ.ಟಿ.ಶ್ರೀಕಂಠೇಗೌಡರು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಎರಡೆರಡು ಬಾರಿ ಶಿಕ್ಷಕರನ್ನು ಸಂಪರ್ಕಿಸಿದ್ದರು. ಮನವಿ ಪತ್ರವನ್ನೂ ರವಾನಿಸಿದ್ದರು. ಶ್ರೀಕಂಠೇಗೌಡರೇ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎನ್ನುವ ಖಚಿತತೆ ಎಲ್ಲರಲ್ಲಿತ್ತು. ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನಕ್ಕೂ ಮುನ್ನ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಕೆ.ವಿವೇಕಾನಂದರಿಗೆ ಜೆಡಿಎಸ್ ಬಿ-ಫಾರಂ ದೊರಕಿರುವುದು ಎಲ್ಲರ ನಿರೀಕ್ಷೆಯನ್ನು ತಲೆಕೆಳಗು ಮಾಡಿದಂತಾಗಿದೆ.
ಜೆಡಿಎಸ್ನೊಳಗೆ ಈ ಬೆಳವಣಿಗೆ ನಡೆದಿದ್ದರೆ ಅತ್ತ ಬಿಜೆಪಿಯೊಳಗೆ ಈಗಾಗಲೇ ಅಭ್ಯರ್ಥಿ ಎಂದು ಘೋಷಿಸಿರುವ ಈ.ಸಿ.ನಿಂಗರಾಜ್ಗೌಡ ಅವರು ಅಭ್ಯರ್ಥಿಯಾಗಿ ಬುಧವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಅವರಿಗಿನ್ನೂ ಪಕ್ಷದ ಬಿ-ಫಾರಂ ಸಿಕ್ಕಿಲ್ಲ. ಪಕ್ಷದ ನಾಯಕರು ಮಾತುಕತೆಗೆ ಬರುವಂತೆ ಸೂಚಿಸಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.