7th Pay Commission: 7ನೇ ವೇತನ ಆಯೋಗ, ಹಳೇ ಪಿಂಚಣಿ ಯೋಜನೆ ಜಾರಿ ಬಗ್ಗೆ ಮಹತ್ವದ ಸುಳಿವು

Arun Kumar
0

ಚಿತ್ರದುರ್ಗ, ಮೇ, 31: ಸರ್ಕಾರಿ ನೌಕರರು, ಶಿಕ್ಷಕರ ವರ್ಗ ಕಾಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದು, ಈ ಮೂಲಕ 7ನೇ ವೇತನ ಆಯೋಗ ಜಾರಿ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.

ಹೊಳಲ್ಕೆರೆ ಕ್ಷೇತ್ರದ ಚಿತ್ರಹಳ್ಳಿ, ಕಣಿವೆ, ಬೊಮ್ಮನಕಟ್ಟೆ, ಬಸಾಪುರ, ಬಿ.ದುರ್ಗ, ಕೋಡಿರಂಗವ್ವನಹಳ್ಳಿ ಸೇರಿ ವಿವಿಧ ವಸತಿ ಹಾಗೂ ಖಾಸಗಿ ಶಾಲೆಗಳಲ್ಲಿ ಶುಕ್ರವಾರ (ಮೇ 31) ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚಿಸಿ ಮಾತನಾಡಿದರು.

ಮಾಜಿ ಸಚಿವ, ರಾಜ್ಯದ ಹಿರಿಯ ನಾಯಕ ದಿವಂಗತ ಎ.ಕೃಷ್ಣಪ್ಪ ಅವರ ಕುಟುಂಬದ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರು, ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಕರ ಕಷ್ಟ, ಸಮಸ್ಯೆಗಳ ಅರಿವು ಇದೆ. ಆದ್ದರಿಂದ ಅವರ ಗೆಲುವು ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ರಹದಾರಿ ಆಗಲಿದೆ ಎಂದರು.

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹಾಗೂ ಸರ್ಕಾರಿ ನೌಕರರ ಹಿತಕ್ಕೆ ಬದ್ಧವಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ ವರದಿ ಜಾರಿಗೆ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ವಿಧಾನಸಭೆ ಚುನಾವಣೆ ರೀತಿಯಲ್ಲಿ, ವಿಧಾನ ಪರಿಷತ್ನಲ್ಲೂ ಬಲ ಬೇಕಿದ್ದು, ಡಿ.ಟಿ.ಶ್ರೀನಿವಾಸ್ ಗೆಲುವು ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೆಚ್ಚು ಸಹಕಾರಿ ಆಗಲಿದೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಸೋತು ಸುಣ್ಣವಾಗಿರುವ ಬಿಜೆಪಿಗೆ ವಿಧಾನಪರಿಷತ್ ಚುನಾವಣೆಯಲ್ಲೂ ಸೋಲಿನ ಮುನ್ಸೂಚನೆ ದೊರೆತಿರುವ ಕಾರಣಕ್ಕೆ ವಾಮ ಮಾರ್ಗದಲ್ಲಿ ಸಾಗುತ್ತಿದೆ. ಈ ಮೂಲಕ ಶಿಕ್ಷಕ ಕ್ಷೇತ್ರದ ಪಾವಿತ್ರೃಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ದೂರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಮೂರು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಸಾಧನೆ ಶೂನ್ಯವಾಗಿದ್ದು, ಈಗಾಗಲೇ ಬಹಳಷ್ಟು ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿರುವುದು ವಿಜಯದ ಮುನ್ಸೂಚನೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಕ್ಷಕರ ನೇಮಕಾತಿ, ವೇತನ ಹೆಚ್ಚಳ, ಶಾಲಾ-ಕೊಠಡಿಗಳ ನಿರ್ಮಾಣ, ಶೌಚಗೃಹ ವ್ಯವಸ್ಥೆ ಹೀಗೆ ಅನೇಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇನ್ನೂ ಹೆಚ್ಚಿನ ರೀತಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲು, ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿದ್ಯಾವಂತ ಡಿ.ಟಿ.ಶ್ರೀನಿವಾಸ್ ಅವರ ಗೆಲುವು ಅಗತ್ಯವಾಗಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)