Karnataka Rain: ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ: ಹೊತ್ತಿ ಉರಿದ ತೆಂಗಿನ ಮರ

Arun Kumar
0

ಧಾರವಾಡ, ಏಪ್ರಿಲ್ 18: ಬಿಸಿಲಿನಿಂದ ಬಸವಳಿದ ಕರ್ನಾಟಕದ ಜನರಿಗೆ ವರುಣ ದೇವ ಕೃಪೆ ತೋರಿದ್ದು, ಧಾರವಾಡ, ಗದಗ, ದಾವಣಗೆರೆ ಹಾಗೂ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದರೆ, ಇನ್ನೂ ಕೆಲವು ಭಾಗಗಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ.

ಧಾರವಾಡ ನಗರದಲ್ಲಿ ಮಧ್ಯಾಹ್ನ ಆಲಿಕಲ್ಲು, ಗುಡುಗು- ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕಲಘಟಗಿ ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ತೆಂಗಿನ ಮರ ಹೊತ್ತಿ ಉರಿದಿದೆ. ಮನೆಯೊಂದರ ಮುಂದಿನ ತೆಂಗಿನ ಮರ ಕಣ್ಣೆದುರೆ ಸುಟ್ಟು ಹೋಗಿದೆ. ಇನ್ನು ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ವಿವಿಧೆಡೆ ಆಲಿಕಲ್ಲುಗಳು ಧರೆಗುರುಳಿದ್ದು, ಭೂಮಿ ತಂಪಾಗಿದೆ.

ಕಲಘಟಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಕುಂದಗೋಳ ಪಟ್ಟಣ ಹಾಗೂ ಅಲ್ಲಾಪುರ, ತರ್ಲಘಟ್ಟ, ಕಮಡೊಳ್ಳಿ, ಯರಿನಾರಾಯಣಪುರ, ಚಾಕಲಬ್ಬಿ, ಶಿರೂರು, ದೇವನೂರು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಒಂದು ತಿಂಗಳಿಂದ ಗರಿಷ್ಠ ತಾಪಮಾನ ಹೊಂದಿದ ನವಲಗುಂದ ತಾಲೂಕು ಗುಡುಗು ಮಿಂಚು ಸಹಿತ ಮಳೆ ಸುರಿದು ಪಟ್ಟಣ ತಂಪಾಗಿಸಿದೆ. ಮಳೆಯ ಪರಿಣಾಮ ಚಿಕ್ಕನರ್ತಿ, ಹಿರೇನರ್ತಿ, ಯರಗುಪ್ಪಿ, ಗುಡೇಣಕಟ್ಟಿ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಗುರುವಾರ ಮಧ್ಯಾಹ್ನ 4 ಘಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಸಂಜೆ 7 ಗಂಟೆಗೆ ರಭಸವನ್ನು ಪಡೆಯಿತು. ಸುಮಾರು ಮೂರು ಗಂಟೆಗಳ ಕಾಲ ಮಳೆಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ಧಾರವಾಡ ಜನತೆ ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮಂಡ್ಯ ನಗರದ ಮಳವಳ್ಳಿ ತಾಲೂಕಿನ ಕೆಲವೆಡೆ 20 ನಿಮಿಷ ಮಳೆ ಸುರಿದಿದೆ. ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯಿಂದ ಸಕ್ಕರೆ ನಾಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಬಳ್ಳಾರಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಜಿಲ್ಲೆಯ ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ತೋರಣಗಲ್ಲಿನಲ್ಲಿ ಗುಡುಗು ಸಮೇತ ಮಳೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)