ಮಡಿಕೇರಿ, ಸೆಪ್ಟೆಂಬರ್ 04: ಕೊಡಗಿಗೆ ತೆರಳುವ ಪ್ರವಾಸಿಗರು ಇಲ್ಲಿನ ಇತಿಹಾಸದ ಕಥೆ ಕೇಳಲು ಉತ್ಸುಕರಾಗಿರುತ್ತಾರೆ. ರಾಜ್ಯದಲ್ಲಿರುವ ಜಿಲ್ಲೆಗಳ ಪೈಕಿ ತನ್ನದೇ ಆದ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭೌಗೋಳಿಕವಾಗಿ ವಿಭಿನ್ನತೆ ಹೊಂದಿರುವುದು ಮತ್ತು ವಾತಾವರಣದ ಕಾರಣದಿಂದಾಗಿ ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ ಲ್ಯಾಂಡ್ ಹೀಗೆ ಅನ್ವರ್ಥ ನಾಮಗಳಿಂದ ಕರೆಯಲಾಗುತ್ತಿದೆ. ಕಾಫಿ, ಕರಿಮೆಣಸು, ಏಲಕ್ಕಿ ಇನ್ನಿತರ ವಾಣಿಜ್ಯ ಬೆಳೆಗಳು ಬದುಕಿಗೆ ಆಧಾರವಾಗಿದ್ದರೂ ಕಳೆದ ಕೆಲವು ದಶಕಗಳಿಂದೀಚೆಗೆ ಪ್ರವಾಸೋದ್ಯವೂ ಇಲ್ಲಿನ ಜೀವಾಳವಾಗುತ್ತಿದೆ.
ಮೊದಲ ಬಾರಿಗೆ ಕೊಡಗಿಗೆ ಹೋಗುವವರಿಗೆ ಒಂದಷ್ಟು ಅಚ್ಚರಿಗಳು ಕಾಣಿಸದಿರದು. ಅದರಲ್ಲೂ ಈ ಸಮಯದಲ್ಲಿ ಸುರಿಯುವ ಮಳೆ ಮೋಡಕವಿದ ವಾತಾವರಣ, ಬೆಟ್ಟಗುಡ್ಡಗಳು, ಅದರ ಮೇಲೆ ತೇಲಿ ಹೋಗುವ ಮಂಜು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಭೌಗೋಳಿಕವಾಗಿ ಪುಟ್ಟದಾಗಿರುವ ಜಿಲ್ಲೆ ಒಂದು ಕಾಲದಲ್ಲಿ ಪ್ರತ್ಯೆಕ ರಾಜ್ಯವಾಗಿತ್ತು. ಇದೀಗ ಕರ್ನಾಟಕದೊಂದಿಗೆ ಲೀನವಾಗಿದೆ. ಅದಕ್ಕೂ ಮೊದಲು ಹೇಗಿತ್ತು ಎನ್ನುವ ಕುತೂಹಲ ಹಲವರನ್ನು ಕಾಡುತ್ತದೆ.
ಕೊಡಗಿನ ಇತಿಹಾಸವನ್ನು ಮೆಲುಕು ಹಾಕುತ್ತಾ ಹೋದರೆ ಒಂದಷ್ಟು ಅಚ್ಚರಿಯ ಮಾಹಿತಿಗಳು ನಮಗೆ ದೊರೆಯುತ್ತವೆ. ಕೊಡಗು ಟಿಪ್ಪು ಸುಲ್ತಾನ್ ದಾಳಿಗೆ ಒಳಗಾಗಿದ್ದು, ಬ್ರಿಟೀಷರ ಪ್ರಭಾವ ಬೀರಿದ್ದು, ಹೀಗೆ ಹತ್ತಾರು ವಿಚಾರಗಳು ಹೊರ ಬರುತ್ತವೆ. ಇದಕ್ಕೆಲ್ಲ ಸಾಕ್ಷಿ ಎಂಬಂತೆ ಮಡಿಕೇರಿ ನಗರದ ಹೃದಯಭಾಗದಲ್ಲಿರುವ ಕೋಟೆ ಮತ್ತು ಅರಮನೆ ಗಮನಸೆಳೆಯುತ್ತದೆ. ಹಾಗೆಯೇ ರಾಜರ ಆಳ್ವಿಕೆಯ ಕುರಿತಂತೆ ನೋಡುವುದಾದರೆ ಕ್ರಿ.ಶ. ಎರಡನೇ ಶತಮಾನದ ತಮಿಳು ಸಾಹಿತ್ಯದಲ್ಲಿ ಉಲ್ಲೇಖ ಸಿಗುತ್ತದೆ ಎನ್ನಲಾಗಿದೆ.
ಅಂದಿನ ಕುಡುಕಂ ಕೊಡಗೇ ಆಗಿತ್ತಾ?
ಮಧುರೆಯನ್ನು ಆಳುತ್ತಿದ್ದ ಪಾಂಡ್ಯ ರಾಜನ ಆಳ್ವಿಕೆಯಲ್ಲಿ ರಾಜ್ಯ ವಿಸ್ತೀರ್ಣವು ಪಶ್ಚಿಮದ ಕುಡುಕಂ ವರೆಗೆ ಇತ್ತು ಎಂದು ಹೇಳಲಾಗಿದೆ. ಇತಿಹಾಸಕಾರರು ಅಭಿಪ್ರಾಯ ಪಡುವಂತೆ ಆ ಕುಡುಕಂ ಕೊಡಗೇ ಆಗಿದೆ. ಅದಾದ ನಂತರದ ಇತಿಹಾಸವನ್ನು ನೋಡಿದ್ದೇ ಆದರೆ 4 ರಿಂದ 11ನೇ ಶತಮಾನದವರೆಗೆ ಕೊಡಗು ಗಂಗ ರಾಜರ ಆಳ್ವಿಕೆಯಲ್ಲಿತ್ತೆಂದೂ ಅವರ ಅಧೀನ ರಾಜರಾಗಿ ಚೆಂಗ್ವಾಳರು ಆಳುತ್ತಿದ್ದರೆಂದೂ ಇದಾದ ನಂತರ ತಮಿಳುನಾಡಿನ ಚೋಳರು ಕೂಡ ಕೆಲಕಾಲ ರಾಜ್ಯಭಾರ ನಡೆಸಿದ್ದರೆಂದೂ, ಆ ನಂತರ ಕೆಲ ಪ್ರಾಂತ್ಯವನ್ನು ಹೊಯ್ಸಳ ವಂಶದವರು ಆಳಿದ್ದರು ಎಂದು ಹೇಳಲಾಗುತ್ತಿದೆ.
ಇದಾದ ಬಳಿಕ ಶತಮಾನದವರೆಗೆ ನಾಯರ್ ಎಂಬ ಸ್ಥಳೀಯ ನಾಯಕರು ಆಳಿದ್ದರೆಂದೂ ಅಲ್ಲದೆ ಕೊಡಗಿನ ಸಣ್ಣ, ಪುಟ್ಟ ಭಾಗಗಳಲ್ಲಿ ಹೋರಾಟ ನಡೆಸುತ್ತಾ ರಾಜ್ಯಭಾರ ನಡೆಸುತ್ತಿದ್ದರಿಂದ ಹರಿದು ಹಂಚಿ ಹೋಗುವಂತಾಯಿತು. ಜತೆಗೆ ಸದಾ ಯುದ್ಧ ಮಾಡುತ್ತಿದ್ದರಿಂದ ಇಡೀ ಪ್ರಾಂತ್ಯ ಒಂದೊಳ್ಳೆಯ ಆಡಳಿತವಿಲ್ಲದೆ ಸೊರಗಿ ಹೋಗಿತ್ತು. ಇಂತಹ ಸಮಯದಲ್ಲಿಯೇ ಕೊಡಗಿಗೆ ಶಿವಮೊಗ್ಗದ ಇಕ್ಕೇರಿ ರಾಜವಂಶದವರ ಆಗಮನವಾಯಿತು. ಇಲ್ಲಿನ ರಾಜರ ಕಿತ್ತಾಟದಿಂದ ಹಂಚಿಹೋಗಿದ್ದ ಪ್ರಾಂತ್ಯವನ್ನು ಒಟ್ಟುಗೂಡಿಸಿ ರಾಜ್ಯ ಸ್ಥಾಪನೆ ಮಾಡಲಾಯಿತು.
ಹಾಲೇರಿ ಅರಸರೆಂಬ ಹೆಸರು ಬಂದಿದ್ದೇಗೆ?
ಈಗಿನ ಮಡಿಕೇರಿಗೆ ಸುಮಾರು ಐದು ಕಿ.ಮೀ.ದೂರದಲ್ಲಿರುವ ಹಾಲೇರಿಯಲ್ಲಿ ನೆಲೆಸಿ ಇಕ್ಕೇರಿ ರಾಜವಂಶದ ರಾಜಕುಮಾರ ವೀರರಾಜನು ಆಡಳಿತ ನಡೆಸಲು ಆರಂಭಿಸಿದನು. ಇಕ್ಕೇರಿಯಿಂದ ಬಂದು ಹಾಲೇರಿ ಎಂಬಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ರಾಜ್ಯಭಾರ ಮಾಡಿದ್ದರಿಂದ ಹಾಲೇರಿ ಅರಸರು ಎಂಬ ಹೆಸರು ಬಂತು. ಈ ಹಾಲೇರಿ ವಂಶದ ರಾಜರು 1600 ರಿಂದ 1834ರವರೆಗೆ ಕೊಡಗನ್ನು ಆಳಿದರು. ಈ ಅರಸರ ಆಡಳಿತದ ಬಗ್ಗೆ ನೋಡಿದ್ದೇ ಆದರೆ 1681ರ ಕಾಲಘಟಘಟ್ಟದಲ್ಲಿ ಆಗ ಆಡಳಿತದಲ್ಲಿದ್ದ ಮುದ್ದರಾಜ ಹಾಲೇರಿಯಿಂದ ಮಡಿಕೇರಿ ಆಡಳಿತವನ್ನು ಬದಲಿಸಿದನು. ಇಲ್ಲಿಂದಲೇ ರಾಜ್ಯಭಾರ ನಡೆಸಲಾರಂಭಿಸಿದನು.
ಈತನ ಕಾಲಾನಂತರ 1687 ರಿಂದ 1736ರವರೆಗೆ ದೊಡ್ಡವೀರಪ್ಪ, 1789ರಿಂದ 1803ರವರೆಗೆ ದೊಡ್ಡವೀರರಾಜೇಂದ್ರ ಆಡಳಿತ ನಡೆಸಿದ್ದಾರೆ. (ಇವರ ಆಡಳಿತದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ದೊಡ್ಡವೀರರಾಜೇಂದ್ರನನ್ನು ಸೆರೆ ಹಿಡಿದು ಬಂಧಿಸಿಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಬಂದು 1792ರಲ್ಲಿ ವೀರರಾಜೇಂದ್ರಪೇಟೆಯನ್ನು ಸ್ಥಾಪಿಸುತ್ತಾರೆ. ಅವತ್ತಿನ ವೀರರಾಜೇಂದ್ರಪೇಟೆ ಇವತ್ತು ವೀರಾಜಪೇಟೆಯಾಗಿದೆ.)
ಕರ್ನಾಟಕದೊಂದಿಗೆ ಲೀನವಾಗಿದ್ದು ಹೇಗೆ?
ಇನ್ನು 1811ರಿಂದ 1820ರವರೆಗೆ ಲಿಂಗರಾಜೇಂದ್ರ ಒಡೆಯರ್ ಆಡಳಿತ ನಡೆಸಿದರು. 1834ರಲ್ಲಿ ಲಿಂಗರಾಜೇಂದ್ರ ಒಡೆಯರ್ ಪುತ್ರ ಚಿಕ್ಕವೀರರಾಜೇಂದ್ರ ಬ್ರಿಟೀಷರಿಂದ ಪದಚ್ಯುತಿಗೊಳ್ಳುತ್ತಾನೆ. ಈತನ ಪದಚ್ಯುತಿ ಬಳಿಕ 1839 ರಿಂದ 1941ರವರೆಗೆ ಕೊಡಗನ್ನು ಬ್ರಿಟೀಷರು ಪ್ರತ್ಯೇಕ ರಾಜ್ಯಘಟಕವಾಗಿ ಆಳಿದ್ದು ವಿಶೇಷವಾಗಿದೆ. ಇದು ಸ್ವಾತಂತ್ರ್ಯ ಸಿಕ್ಕ ಬಳಿಕವೂ ರಾಜ್ಯವಾಗಿಯೇ ಉಳಿದಿತ್ತು. 1950ರಲ್ಲಿ ಜಾರಿಗೆ ಬಂದ ಭಾರತದ ರಾಜ್ಯ ಘಟನೆಯ ಅನ್ವಯ ಸಿ ತರಗತಿಯ ಸಂಸ್ಥಾನವಾಯಿತು. ಆ ನಂತರ 1952ರಲ್ಲಿ ಕೊಡಗು ಸಂಸ್ಥಾನಕ್ಕೆ ಮಹಾ ಚುನಾವಣೆ ನಡೆದು ಇಬ್ಬರು ಮಂತ್ರಿಗಳುಳ್ಳ ಸರ್ಕಾರ ಆಡಳಿತಕ್ಕೆ ಬಂದಿತು.
ಇದಾದ ಬಳಿಕ 1956ನೇ ನವೆಂಬರ್ 1ರವರೆಗೆ ಈ ಸಂಸ್ಥಾನ ಆಡಳಿತ ನಡೆಸಿತ್ತಾದರೂ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯದೊಂದಿಗೆ ಕೊಡಗು ಲೀನವಾಯಿತು. ಇದಾದ ನಂತರ ಮೈಸೂರು ರಾಜ್ಯ ಬದಲಾಗಿ ಕರ್ನಾಟಕವಾದಾಗ ಕೊಡಗು ಜಿಲ್ಲೆಯಾಗಿ ಉಳಿದು ಡೆಫ್ಯೂಟಿ ಕಮೀಷನರ್ ಆಡಳಿತಕ್ಕೆ ಒಳಪಟ್ಟಿತು. ಇದೆಲ್ಲವೂ ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿದೆ. ಆದರೆ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಕೋಟೆ, ಅರಮನೆ, ಗದ್ದುಗೆ ಎಲ್ಲವನ್ನೂ ನೋಡುವಾಗ ರಾಜರ ಬಗೆಗೆ ತಿಳಿಯಬೇಕೆನಿಸುವುದು ಸಹಜವಾಗಿರುತ್ತದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.