Ganesh Chaturthi: ಸೂಕ್ಷ್ಮ ಪ್ರದೇಶದಲ್ಲಿ ಈ ನಿಯಮ ಪಾಲಿಸಲು ಪೊಲೀಸ್‌ ಇಲಾಖೆ ಸೂಚನೆ

Arun Kumar
0

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಮಾರ್ಗಸೂಚಿ ಹೊರಡಿಸಿದ್ದು, ಗಣೇಶ ಮೂರ್ತಿ ವಿಸರ್ಜನೆ ಹಾಗೂ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುವುದು ಸೇರಿದಂತೆ ಹಲವು ಮಹತ್ವದ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದೆ. ಗೌರಿ-ಗಣೇಶ ಹಬ್ಬ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿದೆ. ಕೋಮು ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸಂಚಾರ ದಟ್ಟಣೆ ಇರುವ ಕಡೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಹಾಗೂ ವಾಹನ ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣ ಕಡಿಮೆ ಇರಬೇಕು ಹಾಗೂ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಲಾಗಿದೆ.

ಸೂಕ್ಷ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸಬಾರದು
ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡುವ ಸಂದರ್ಭದಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆಯು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಿದೆ. ಅದರಲ್ಲಿ ಮುಖ್ಯವಾಗಿ ಮೆರವಣಿಗೆ ನಡೆಸುವ ಸಂರ್ಭದಲ್ಲಿ ಸೂಕ್ಷ್ಮ ಸ್ಥಳ, ಅತೀ ಸೂಕ್ಷ್ಮಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಪಟಾಕಿಗಳನ್ನು ಸಿಡಿಸಬಾರದು ಹಾಗೂ ಕರ್ಪೂರಗಳನ್ನು ಹಚ್ಚಬಾರದು ಎಂದು ಸೂಚಿಸಲಾಗಿದೆ.

ಪೊಲೀಸ್ ಇಲಾಖೆಯ ಪ್ರಮುಖ ಮಾರ್ಗಸೂಚಿಗಳು
* ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪ್ರತಿಷ್ಠಾಪನೆ ಮಾಡಬೇಕು.

* ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗೆ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆ (ದೇಣಿಗೆ)ಯನ್ನು ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

* ಯಾವುದೇ ಕಾರಣಕ್ಕೂ ಗಣೇಶ ಪ್ರತಿಷ್ಠಾಪನೆಯನ್ನು ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪಿಸಬಾರದು ಹಾಗೂ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಿ ನಂತರವಷ್ಟೇ ಪ್ರತಿಷ್ಠಾಪನೆ ಮಾಡಬೇಕು.

* ಫ್ಲೆಕ್ಸ್, ಬೋರ್ಡ್ ಹಾಗೂ ಬ್ಯಾನರ್ಗಳ ಅವಳಡಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

* ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

* ಗಣೇಶ ಮೂರ್ತಿ ಪ್ರತಿಷ್ಠಾಪಕರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು.

* ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು

* ಬೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರಿಂದ ನಿರಪೇಕ್ಷಣಾ ಪತ್ರ (ಎನ್.ಓ.ಸಿ) ಪಡೆಯಬೇಕು.

* ಹಿರಿಯ ನಾಗಕರಿಕರು, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು. ಈ ನಿಯಮ ಉಲ್ಲಂಘನೆ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

* ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಮೆರವಣಿಗೆ ಮಾರ್ಗಗಳನ್ನು ಬದಲಾಯಿಸಬಾರದು. ಮಾರ್ಗಗಳನ್ನು ಬದಲಾಯಿಸಿದರೂ ಆಯೋಜಕರನ್ನೇ ನೇರ ಹೊಣೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

* ಗಣೇಶ ವಿಸರ್ಜನೆ ಹಾಗೂ ಮೆರವಣಿಗೆಯನ್ನು ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ವ್ಯವಸ್ಥೆ ಮಾಡಿಕೊಳ್ಳಬೇಕು.

ಆಯೋಜಕರೇ ಜವಾಬ್ದಾರರು
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಪರಾಧಗಳು ಹಾಗೂ ಅವಘಡಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾಧಗಳು ನಡೆದರೆ, ಆ ಆಯೋಜಕರನ್ನೇ ಹೊಣೆ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)