ಹುಬ್ಬಳ್ಳಿ-ಧಾರವಾಡ ಜನರಿಗೆ ಗುಡ್‌ ನ್ಯೂಸ್, ಟೋಲ್ ಸಂಗ್ರಹ ರದ್ದು

Arun Kumar
0

ಹುಬ್ಬಳ್ಳಿ, ಸೆಪ್ಟೆಂಬರ್ 03: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಾಹನ ಸವಾರರಿಗೆ ಸಿಹಿಸುದ್ದಿಯೊಂದಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ರದ್ದುಗೊಳಿಸುವ ಕುರಿತು ಘೋಷಣೆ ಮಾಡಲಾಗಿದೆ. ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರನ್ನು 7/9/2024ರ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಈ ಕುರಿತು ಶಿವಕುಮಾರ ಬೇಳೆ, ಕಾರ್ಯಕಾರಿ ನಿರ್ದೇಶಕರು ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸೆಪ್ಟೆಂಬರ್ 7, 2024ರಂದು ರಸ್ತೆಯ ಗುತ್ತಿಗೆ ಅವಧಿ ಮುಕ್ತಾಯಗೊಳ್ಳಲಿದ್ದು, ಕಂಪನಿ ಆರ್ಥಿಕ ವ್ಯವಹಾರ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.

ಸುತ್ತೋಲೆಯಲ್ಲಿನ ವಿವರ: ಈ ಸುತ್ತೋಲೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆಯನ್ನು ಸ್ಥಗಿತಗೊಳಿಸುವ ಮತ್ತು ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಈ ಮೂಲಕ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನೌಕರರಿಗೆ ತಿಳಿಸುವುದೇನೆಂದರೆ, ನಿಮ್ಮೆಲ್ಲರಿಗೆ ತಿಳಿದಿರುವಂತೆ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ಸಂಸ್ಥೆಯು ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಗೊಳಿಸುವ ಜವಾಬ್ದಾರಿಯನ್ನು ದಿನಾಂಕ 05-02-1998 ರಂದು ಸರ್ಕಾರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಮುಕ್ತಾಯಗೊಳಿಸಿದೆ.

ಸದರಿ ಒಡಂಬಡಿಕೆಯಂತೆ ಗುತ್ತಿಗೆಯ ಅವಧಿಯು ದಿನಾಂಕ 05-05-2024 ರಂದು ಕೊನೆಗೊಳ್ಳಬೇಕಾಗಿತ್ತು. ಕಂಪನಿಗೆ ಆದಾಯದಲ್ಲಾದ ನಷ್ಟದ ಕಾರಣಗಳಿಂದಾಗಿ, ಸರ್ಕಾರವು ಗುತ್ತಿಗೆಯ ಅವಧಿಯನ್ನು ದಿನಾಂಕ 06-09-2024 ರವರೆಗೆ ವಿಸ್ತರಿಸಿದೆ. ಆದ್ದರಿಂದ, ಪ್ರತಿಯೊಬ್ಬ ನೌಕರರಿಗೆ, ಈ ಸುತ್ತೋಲೆಯ ಮುಖಾಂತರ ಅಧಿಕೃತವಾಗಿ ತಿಳಿಸುವುದೇನೆಂದರೆ, ದಿನಾಂಕ 07-09-2024ರಿಂದ ರಸ್ತೆ ಬಳಕೆದಾರರ ಶುಲ್ಕ ಆಕರಣೆ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.

ನಿಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ತಿಳಿಸಿದಂತೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಬಳಕೆದಾರರ ಶುಲ್ಕ ಆಕರಣೆ ಮತ್ತಿತರ ಸಂಬಂಧಿತ ಕೆಲಸಗಳನ್ನು ನಿಭಾಯಿಸಲು ನೇಮಕ ಮಾಡಿಕೊಳ್ಳಲಾಗಿತ್ತು. ಸದರಿ ರಸ್ತೆಯ ಗುತ್ತಿಗೆಯು ದಿನಾಂಕ 07-09-2024 ರಂದು ಮುಕ್ತಾಯಗೊಳ್ಳುವುದರಿಂದಾಗಿ ಕಂಪನಿಯ ಆರ್ಥಿಕ ವ್ಯವಹಾರವು ಸ್ಥಗಿತಗೊಳ್ಳುವುದು.

ಆದ್ದರಿಂದ, ಅಧಿಕೃತವಾಗಿ ನಿಮ್ಮೆಲರಿಗೆ ತಿಳಿಸುವುದೆನೇಂದರೆ, ಕಂಪನಿಯಡಿಯಲ್ಲಿ ಕೆಲಸ ಮಾಡುವ ನೌಕರರನ್ನು ದಿನಾಂಕ 07-09-2024ರ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗುವುದು. ನಿಮ್ಮೆಲ್ಲರ ಸಹಕಾರ ಮತ್ತು ಶ್ರಮದಿಂದಾಗಿ ಕಂಪನಿಯು ತನ್ನ ಪೂರ್ಣಾವಧಿಯ ಗುತ್ತಿಗೆಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಕಂಪನಿಯು ನಿಮಗೆ ಕುಟುಂಬದವರಿಗೆ ಅಭಿನಂದನೆಗಳನ್ನು ಸಲ್ಲಿಸುವುದೊರೊಂದಿಗೆ ನಿಮ್ಮ ಭವಿಷ್ಯದ ಜೀವನವು ಸುಖಕರವಾಗಿರಲೆಂದು ಆಶಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

6 ಪಥದ ರಸ್ತೆಯಾಗಿ ಅಭಿವೃದ್ಧಿ: ಸದ್ಯ 4 ಪಥವಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. 1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು NH4 ರಸ್ತೆಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ ವರೆಗಿನ ಒಟ್ಟು 31.6 ಕಿ. ಮೀ. 6 ಪಥದ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ 2022ರಲ್ಲಿಯೇ ಟೆಂಡರ್ ಕರೆಯಲಾಗಿದೆ.

ಈ ಕಾಮಗಾರಿ ಮುಗಿಸಲು 2.5 ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರು ನಿರ್ವಹಿಸುವ ಕರಾರೊಂದಿಗೆ ಟೆಂಡರ್ ನೀಡಲಾಗಿದೆ. ಮುಖ್ಯವಾಗಿ ಈಗಿರುವ ಬೈಪಾಸ್ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಈ ಟೋಲ್ ಕೆಲಗೇರಿ ಮತ್ತು ನರೆಂದ್ರ ನಡುವೆ ಇರಲಿದ್ದು, ಇದರಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್ನಿಂದ ವಿನಾಯಿತಿ ನೀಡಲಾಗಿದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮದ್ಯದೊಳಗಿನ ಸಂಚರಿಸುವ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪುಣೆ-ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ವಿಸ್ತರಣೆ ಆಗಿರಲಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಉಂಟಾಗುತ್ತಿದ್ದವು. ಆದ್ದರಿಂದ ಬೈಪಾಸ್ ಕೂಡಾ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ಒತ್ತಾಯವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)