ದಾವಣಗೆರೆ, ಜೂನ್, 07: ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದಿದ್ದು, ಇದರಿಂದ ಅನ್ನದಾತರು ಸಂತಸಗೊಂಡಿದ್ದರೆ, ಮತ್ತೊಂದೆಡೆ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿ ಭೀತಿ ಹುಟ್ಟಿಸಿದ್ದಾನೆ. ಹಾಗೆಯೇ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆಯಿಂದ ಅನಾಹುತಗಳು ಸೃಷ್ಟಿಯಾಗಿವೆ.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರದಲ್ಲಿ ನಿನ್ನೆ ಮತ್ತು ಇಂದು ಧಾರಾಕಾರ ಮಳೆ ಸುರಿದಿದ್ದು, ಇದರಿಂದಾಗಿ ವಿದ್ಯಾರ್ಥಿಗಳು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಎವಿಕೆ ರಸ್ತೆ ಸೇರಿದಂತೆ ಹಲವೆಡೆ ನೀರು ನಿಂತಿದ್ದು, ಜನರಿಗೆ ತೊಂದರೆ ಆಯಿತು. ಮಧ್ಯಾಹ್ನ ಶುರುವಾದ ಮಳೆಯು ಸುಮಾರು ಒಂದೂವರೆ ಗಂಟೆಗಳ ಕಾಳ ಸುರಿಯಿತು. ಇನ್ನು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಸಿಟಿ ಮಂದಿಗೆ ಕೂಲ್ ಕೂಲ್ ವಾತಾವರಣ ಇತ್ತು. ಗ್ರಾಮೀಣ ಪ್ರದೇಶದಲ್ಲಿಯೂ ವರುಣ ಆರ್ಭಟಿಸಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಸುಮಾರು ಒಂದೂವರೆ ಗಂಟೆಗಳ ಕಾಲ ಧಾರಾಕಾರ ಸುರಿಯಿತಲ್ಲದೇ, ಶಾಲೆ ಬಿಡುವ ವೇಳೆಯಲ್ಲಿ ಮಳೆ ಬಂದಿದ್ದರಿಂದ ವಿದ್ಯಾರ್ಥಿಗಳು ಮಳೆಯಲ್ಲಿ ತೊಯ್ದುಕೊಂಡು ಮನೆಗೆ ಹೋಗುವಂತಾಯಿತು. ಕೆಲ ಬಡಾವಣೆಗಳಲ್ಲಿ ನೀರು ನಿಂತು ಜನರು ಪರದಾಡಿದ ಘಟನೆಗಳು ನಡೆದಿವೆ.
ಕಳೆದ ಒಂದು ವಾರ ಬಿಡುವು ನೀಡಿದ್ದ ವರುಣ ಮತ್ತೆ ಆರ್ಭಟಿಸಿದ್ದು, ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗಿದ್ದಾರೆ. ಜಗಳೂರು ತಾಲೂಕಿನ ಹಲವೆಡೆಯೂ ಮಳೆಯಾಗಿದ್ದು, ಬಿಳಿಚೋಡು ಹೋಬಳಿ ವ್ಯಾಪ್ತಿಯ ಪಲ್ಲಾಗಟ್ಟೆ, ಸೊಕ್ಕೆ ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಳೆರಾಯ ಆರ್ಭಟಿಸಿದ್ದಾರೆ.
ಅಸಗೋಡು, ದಿದ್ದಿಗೆ, ಪಲ್ಲಾಗಟ್ಟೆ, ಮೆದಿಕೇರನಹಳ್ಳಿ, ಗಡಿಮಾಕುಂಟೆ, ಗೊಡೆ ತಾರೇಹಳ್ಳಿ, ಜಗಳೂರು, ಹುಚ್ಚೆಂಗಿಪುರ ಮುಂತಾದ ಕಡೆ ಉತ್ತಮ ಮಳೆ ಬಿದ್ದಿದೆ. ಪಲ್ಲಾಗಟ್ಟೆ ಗ್ರಾಮದ ಸಮೀಪ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಇತ್ತೀಚೆಗೆ 50,00,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಚನ್ನಪ್ಪನಕಟ್ಟೆ ಹಳ್ಳವು ದೊಡ್ಡ ಚೆಕ್ ಡ್ಯಾಂನಂತೆ ತುಂಬಿ ಹರಿಯುತ್ತಿದೆ.
ಹೊನ್ನಾಳಿಯಲ್ಲಿಯೂ ಭಾರೀ ಮಳೆಯಾಗಿದ್ದು, ಪಟ್ಟಣದ ಖಾಸಗಿ ಬಸ್ ನಿಲ್ದಾಣವು ಕೆರೆಯಂತೆ ಮಾರ್ಪಟ್ಟಿತ್ತು. ಇನ್ನು ಹತ್ತಾರು ವರ್ಷಗಳ ಹಿಂದೆ ಬಸ್ ನಿಲ್ದಾಣದ ಸುತ್ತಮುತ್ತ ನಿರ್ಮಿಸಿದ್ದ ಅವೈಜ್ಞಾನಿಕ ಚರಂಡಿಗಳಿಂದಾಗಿ ನೀರು ಸರಾಗವಾಗಿ ಹರಿದು ಹೋಗದಿರುವುದು ಮತ್ತು ಚರಂಡಿಯೊಳಗೆ ವ್ಯಾಪಕವಾಗಿ ಕಸಕಡ್ಡಿಗಳನ್ನು ಹಾಕುತ್ತಿರುವುದರಿಂದ ನೀರು ನಿಲ್ಲುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.