ಮಂಗಳೂರು, ಜೂನ್ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲು ಗುಡುಗಿನಿಂದ ಸಾವು ಪ್ರಕರಣ ಹೆಚ್ಚಾಗಿ ಸಂಭವಿಸುವ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆಯನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪದ ಸಿದ್ಧತೆ ಸೇರಿದಂತೆ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಆರಂಭಿಕ ಹಂತದಲ್ಲಿ ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯದ ಕೆಲವೆಡೆ ನಾಲ್ಕೈದು ಕಡೆಗಳಲ್ಲಿ ಈ ಪ್ರತಿಬಂಧಕಗಳನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಸಿದರು.
ಇನ್ನೂ ಈ ವೇಳೆ ಮಾಧ್ಯಮಗಳ ಜೊತೆಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಳೆದ ಸುಮಾರು 10 ವರ್ಷಗಳಲ್ಲಿ ಈ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚಿನಿಂದ ಸಾವು ಹಾಗೂ ಆಸ್ತಿಪಾಸ್ತಿ ನಷ್ಟವಾಗಿರುವ ಪ್ರಕರಣಗಳು ನಡೆಯುತ್ತಿದೆ. ಎತ್ತರದ ಪ್ರದೇಶವಾಗಿರುವ ಕಾರಣ ಮಿಂಚಿನಿಂದ ಹೆಚ್ಚಿನ ಅಪಾಯ ಈ ಭಾಗದಲ್ಲಿ ಸಂಭವಿಸುತ್ತಿರುವುದಾಗಿ ಅಂದಾಜಿಸಲಾಗಿದ್ದು, ಹಾಗಾಗಿ ಪ್ರಾಯೋಗಿಕವಾಗಿ ಈ ಪ್ರದೇಶಗಳಲ್ಲಿ ಈ ಮಿಂಚು ಪ್ರತಿಬಂಧಕ ಅಳವಡಿಸಲು ಕ್ರಮ ವಹಿಸಿದೆ ಎಂದರು.
ಮಳೆಗಾಲದ ಸಂಭವಿಸಬಹುದಾದ ವಿಪತ್ತುಗಳನ್ನು ಎದುರಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳು ಈಗಿನಿಂದಲೇ ಸನ್ನದ್ಧರಾಗಿರುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಾಕೃತಿಕ ವಿಕೋಪದ ಸಂದರ್ಭ ಉಪಯೋಗಿಸುವ ಯಂತ್ರೋಪಕರಣಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೆಂಪು ಮಣ್ಣಿನ ಕಾನೂನುಬಾಹಿರ ಗಣಿಗಾರಿಕೆ ಹಾಗೂ ಸಾಗಾಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲು ಸಚಿವರು ಸೂಚನೆ ನೀಡಿದರು.
ಬೋಳಿಯಾರುವಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಯಾರೇ ಕಾನೂನಿಗೆ ವಿರುದ್ಧ ಹೋದರೆ ಕಠಿಣ ಕ್ರಮ ವಹಿಸಲಾಗುತ್ತದೆ. ಅದರ ಬಗ್ಗೆ ಬಿಜೆಪಿಯವರು ಹೇಳುವ ಅಗತ್ಯವಿಲ್ಲ. ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಇಂತಹ ಘಟನೆಗಳ ಬಗ್ಗೆ ಕ್ರಮ ವಹಿಸುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.