ಮೈಸೂರು, ಮೇ 05: ಈ ವರ್ಷದ ಮೊದಲ ಮಳೆ ಮೈಸೂರು ಜಿಲ್ಲೆಯ ಹಲವೆಡೆ ಸುರಿಯುವುದರೊಂದಿಗೆ ಬೆಂದು ಕಂಗಾಲಾಗಿದ್ದ ಭೂಮಿಗೆ ಸ್ವಲ್ಪ ಮಟ್ಟಿಗೆ ತಂಪು ಮಾಡಿದೆ. ಗಾಳಿ ಮಳೆಗೆ ಹಲವು ಅನಾಹುತಗಳಾಗಿದ್ದರೂ ಸದ್ಯ ಮಳೆ ಬಂತಲ್ಲ ಎಂಬ ನೆಮ್ಮದಿ ತಂದಿದೆ. ಈ ನಡುವೆ ಹೆಚ್.ಡಿ.ಕೋಟೆ ತಾಲೂಕಿನ ಕೆಲವು ಕೆರೆಗಳಿಗೆ ಜಲಾಶಯದಿಂದ ನೀರು ಹರಿಸಿರುವುದು ರೈತರು ಖುಷಿಪಡುವಂತಾಗಿದೆ.
ಕಳೆದ ಬಾರಿ ಮುಂಗಾರು ಆಶಾದಾಯಕವಾಗಿಲ್ಲದ ಕಾರಣ ವಾಡಿಕೆಯ ಮಳೆ ಸುರಿಯದೆ ಕೆರೆಕಟ್ಟೆಗಳು ತುಂಬಿರಲಿಲ್ಲ. ಹೀಗಾಗಿ ಬೇಸಿಗೆಯ ಆರಂಭದಲ್ಲಿಯೇ ಬಹುತೇಕ ಗ್ರಾಮೀಣ ಭಾಗದ ಕೆರೆಗಳು ನೀರಿಲ್ಲದೆ ಒಣಗಿ ಹೋಗಿವೆ. ಇದರಿಂದ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಇದೀಗ ಮಳೆ ಸುರಿದ ಕಾರಣ ಸ್ವಲ್ಪ ಮಟ್ಟಿಗೆ ತಂಪಾಗಿದೆ. ಆದರೆ ಕೆರೆಗಳು ಮರು ಜೀವ ಪಡೆಯಬೇಕಾದರೆ ಮುಂಗಾರು ಆರಂಭವಾಗಿ ಉತ್ತಮ ಮಳೆ ಸುರಿದರೆ ಮಾತ್ರ ಸಾಧ್ಯ.
ಈಗಾಗಲೇ ಗ್ರಾಮೀಣ ಭಾಗದ ಕೆರೆಗಳು ಬತ್ತಿಹೋಗಿವೆ. ಹೀಗಾಗಿ ಅಂತರ್ಜಲ ಕಾಪಾಡುವ, ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತಹ ಕೆರೆಗಳನ್ನು ಆಯ್ಕೆ ಮಾಡಿ ಅಂತಹ ಕೆರೆಗಳನ್ನು ಅಭಿವೃದ್ಧಿಗೊಳಿಸಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯವಾಗಲಿದೆ. ಆದರೆ ಸರ್ಕಾರಗಳು ಕೆರೆಗಳ ಅಭಿವೃದ್ಧಿಯತ್ತ ಗಮನಹರಿಸಿ ಅವುಗಳ ಸಂರಕ್ಷಣೆಯತ್ತ ಗಮನಹರಿಸದ ಕಾರಣದಿಂದಾಗಿ ಇವತ್ತು ಅಂತರ್ಜಲದ ಸಮಸ್ಯೆ ಎದುರಿಸುವಂತಾಗಿದೆ.
ಜಲಕ್ಷಾಮದಿಂದ ತತ್ತರಿಸಿರುವ ರೈತಾಪಿ ವರ್ಗ
ಈ ನಡುವೆ ರಾಜ್ಯದಲ್ಲಿ ಭೀಕರ ಬರವನ್ನು ಎದುರಿಸುತ್ತಿರುವ ತಾಲೂಕುಗಳಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಕೂಡ ಸೇರಿದೆ. ಇಲ್ಲಿ ನಾಲ್ಕು ಜಲಾಶಯಗಳು ಮತ್ತು ಕೆರೆಕಟ್ಟೆಗಳಿದ್ದರೂ ಇಲ್ಲಿನ ಜನ ಮತ್ತು ರೈತರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಇದಕ್ಕೆ ಕಾರಣವಾಗಿದ್ದು ಬರ. ಕಳೆದ ಬಾರಿಯ ಮುಂಗಾರಿನಲ್ಲಿ ಕಬಿನಿ, ತಾರಕ, ನುಗು ಮತ್ತು ಹೆಬ್ಬಳ್ಳ ಜಲಾಶಯಗಳು ಭರ್ತಿಯಾಗಿದ್ದರೆ ಜಲಕ್ಷಾಮ ಎದುರಾಗುತ್ತಿರಲಿಲ್ಲ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.