ಚಾಮರಾಜನಗರ, ಮೇ, 12: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸುರಿದ ಮಳೆಗೆ ಜನರು ಹರ್ಷಗೊಂಡಿದ್ದರೆ, ಬಾಳೆ ಬೆಳೆಗಾರರು ಮಾತ್ರ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶನಿವಾರ (ಮೇ 11) ಸುರಿದ ಬಿರುಗಾಳಿ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತಣ್ಣೀರೆರಚಿದಂತಾಗಿದೆ.
ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ, ದೊಡ್ಡಮೋಳೆ, ಡೊಳ್ಳಿಪುರ ಸೇರಿದಂತೆ ಹತ್ತಾರು ಊರುಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಹೆಕ್ಟೇರ್ ಬಾಳೆ ನೆಲಕಚ್ಚಿದ್ದು, ಇನ್ನು 15 ದಿನಗಳಲ್ಲಿ ಎಲ್ಲವೂ ಬಂಪರ್ ಲಾಭ ತಂದುಕೊಡುತ್ತಿದ್ದ ಫಸಲಾಗಿತ್ತು ಎನ್ನುವ ಭರವಸೆಯಲ್ಲಿ ರೈತರಿದ್ದರು.
ಸದ್ಯ, ಮಾರುಕಟ್ಟೆಯಲ್ಲಿ ಕೆ.ಜಿ. ನೇಂದ್ರ ಬಾಳೆಗೆ 40 ರೂಪಾಯಿ, ಏಲಕ್ಕಿ ಬಾಳೆಗೆ 45, ಚಂದ್ರ ಬಾಳೆಗೆ 35 ರೂಪಾಯಿ ದರವಿದ್ದು, ಏನಿಲ್ಲ ಎಂದರೂ 2 ಹೆಕ್ಟೇರ್ನಲ್ಲಿ ಬೆಳೆದ ರೈತ 12-15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದ. ಆದರೆ, ಬೆಲೆ ಇದ್ದ ಹೊತ್ತಲ್ಲೇ ಗಾಳಿಗೆ ಫಸಲು ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.
ದೇವರಾಜಪುರದಲ್ಲಿ ರೈತ ಕಣ್ಣೀರು: ಚಾಮರಾಜನಗರ ತಾಲೂಕಿನ ದೇವರಾಜಪುರದಲ್ಲಿ ಬಸವರಾಜು ಎಂಬ ರೈತ 4,500 ಬಾಳೆ ಕಟ್ಟೆಗಳನ್ನು ಹಾಕಿದ್ದರು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಉತ್ತಮವಾಗಿ ನೇಂದ್ರ ಬಾಳೆಯನ್ನು ಬೆಳೆದಿದ್ದರು. 8 ದಿನದಲ್ಲಿ ಕಟಾವು ಮಾಡಬೇಕು ಎಂದುಕೊಂಡಿದ್ದ ಈ ರೈತನಿಗೆ ಗಾಳಿ-ಮಳೆ ಬರಸಿಡಿಲಿನ ರೀತಿ ಅಪ್ಪಳಿಸಿದ್ದು, 4,000 ಬಾಳೆ ಗಿಡಗಳು ನೆಲಕಚ್ಚಿವೆ. 17-20 ಲಕ್ಷ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದ ರೈತ ಬಸವರಾಜು ಅವರಿಗೆ ದಿಕ್ಕೇ ತೋಚದ ಪರಿಸ್ಥಿತಿ ಎದುರಾಗಿದ್ದು, ಬಾಳೆ ಗಿಡಗಳನ್ನು ಕಂಡು ಕಣ್ಣೀರು ಸುರಿಸುತ್ತಿದ್ದಾರೆ.
6 ಸಾವಿರ ರೂಪಾಯಿ ಪರಿಹಾರ ಬೇಡ: ಕುರುಬ ಸಮುದಾಯದ ಮುಖಂಡ ರಾಜಶೇಖರ್ ಮಾಧ್ಯಮವರೊಂದಿಗೆ ಮಾತನಾಡಿ, ರೈತ ಹೆಕ್ಟೇರ್ಗೆ ಕನಿಷ್ಠ ಎಂದರೂ 1 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾನೆ. ಸಾಲ ಮಾಡಿ ತಿಂಗಳುಗಟ್ಟಲೇ ಫಸಲನ್ನು ಕಾದು ಬೆಳೆ ತೆಗೆದಿದ್ದು, ಹೆಕ್ಟೇರ್ಗೆ 6 ಸಾವಿರ ಬೆಳೆಹಾನಿ ಪರಿಹಾರ ಕೊಡುವುದು ತೀರಾ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೇ ಇದೇ ಕಾರಣಕ್ಕೆ, ರೈತರನ್ನು ಸಾಲದ ಸುಳಿಯಿಂದ, ಆತ್ಮಹತ್ಯೆ ದಾರಿಯಿಂದ ಬಚಾವ್ ಮಾಡಬೇಕಾದ್ದು ಸರ್ಕಾರದ ಹೊಣೆಗಾರಿಕೆಯಾಗಿದೆ. 1 ಹೆಕ್ಟೇರ್ಗೆ 1 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಇಲ್ಲದಿದ್ದರೇ ಅವರ ಪರಿಹಾರದ ಹಣ ಹಾನಿಗೊಳಗಾದ ಫಸಲುನ್ನು ತೆಗೆಸಲು ಸಾಕಾಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.