Lok Sabha Election: ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಮತಚಲಾಯಿಸಿ ಸಂಭ್ರಮಿಸೋಣ

Arun Kumar
0

ಬೆಂಗಳೂರು, ಏಪ್ರಿಲ್ 25: ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತದಾನ ಮಾಡಲು ಪ್ರೇರೇಪಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಾ ಬಂದಿದೆ. ಅದರಲ್ಲೂ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಭಾಗಿಯಾಗಿ ತಮ್ಮ ಹಕ್ಕನ್ನು ಚಲಾಯಿಸಯುವಂತೆ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದು, ನಾವೀಗ ಅದನ್ನು ಪಾಲಿಸುವ ಸಮಯ ಬಂದಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ (ದೇಶದಲ್ಲಿ ಎರಡನೇ) ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಮತದಾನಕ್ಕಾಗಿ ಸರ್ವ ರೀತಿಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿದೆ. ಇದರ ಜತೆಯಲ್ಲಿಯೇ ಮತದಾರರನ್ನು ಮತಕೇಂದ್ರದತ್ತ ಸೆಳೆಯಲು ಹಲವು ಬಗೆಯ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅವುಗಳೆಲ್ಲವೂ ಬರೀ ಮತಕೇಂದ್ರವಾಗಿ ಉಳಿಯದೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಲಾಗುತ್ತಿದೆ.

ದೇಶದಲ್ಲಿ ಐದು ವರ್ಷಗಳ ಬಳಿಕ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಮತ್ತು ಅಧಿಕಾರ ಪಡೆಯಲು ಎನ್ ಡಿಎ ಮತ್ತು ಐಎನ್ ಡಿಐಎ ಒಕ್ಕೂಟಗಳು ಹೋರಾಟ ನಡೆಸುತ್ತಿದ್ದರೆ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆಲುವಿಗಾಗಿ ಮತದಾರರ ಮನೆಬಾಗಿಲು ತಟ್ಟುತ್ತಾ ಅಂತಿಮ ಹಂತದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರತಿ ಚುನಾವಣೆ ಬಂದಾಗಲೂ ಹೊಸ ಮತದಾರರು ಸೇರ್ಪಡೆಯಾಗುತ್ತಾರೆ. ಹೊಸ ಮತದಾರರಿಗೆ ಮತಚಲಾಯಿಸುವುದು ಹೊಸ ಅನುಭವವಾಗಿದೆ.

ಮತದಾರರು ಮತದಾನ ಏಕೆ ಮಾಡಬೇಕು?
ಇನ್ನು ಮತದಾರರು ಮತದಾನ ಏಕೆ ಮಾಡಬೇಕು? ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಎಷ್ಟು ಪ್ರಾಮುಖ್ಯತೆಯಿದೆ? ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಈಗಾಗಲೇ ಚುನಾವಣಾ ಆಯೋಗ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಮಾಡುತ್ತಲೇ ಇದೆ. ದೇಶದಲ್ಲಿ ಪ್ರತಿಯೊಬ್ಬರೂ ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸುವುದರೊಂದಿಗೆ ಹಕ್ಕನ್ನು ಚಲಾಯಿಸಬೇಕು ಎನ್ನುವುದು ಚುನಾವಣಾ ಆಯೋಗದ ಪ್ರಮುಖ ಆಶಯವಾಗಿದೆ. ಇದಕ್ಕಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.

ಹಾಗೆನೋಡಿದರೆ ಪ್ರಜಾಪ್ರಭುತ್ವದಲ್ಲಿ ಐದು ವರ್ಷಕ್ಕೊಮ್ಮೆ ಬದಲಾವಣೆಯನ್ನು ತರುವ ಶಕ್ತಿ ಮತದಾರರಿಗಿದೆ. ಹೀಗಾಗಿಯೇ ಮತದಾರರನ್ನು ಪ್ರಭುಗಳು ಎಂದು ಕರೆಯಲಾಗುತ್ತದೆ. ಇದನ್ನು ಅರಿತು ಪ್ರತಿಯೊಬ್ಬ ಮತದಾರರು ತಮ್ಮ ಮತಕ್ಕೆಷ್ಟು ಮೌಲ್ಯವಿದೆ ಎಂಬುದನ್ನು ಅರಿತು ಅದನ್ನು ಚಲಾಯಿಸಬೇಕಾಗಿದೆ. ಇವತ್ತಿಗೂ ಶೇ.100ರಷ್ಟು ಮತದಾನಗಳಾಗುತ್ತಿಲ್ಲ. ವಿದ್ಯಾವಂತ ಮತದಾರರೇ ಮತಕೇಂದ್ರದತ್ತ ಸುಳಿಯುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ಮತಚಲಾಯಿಸಿ ದೇಶದ ಹೆಮ್ಮೆಯ ಪ್ರಜೆಯಾಗಿ
ಅಯ್ಯೋ ನಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಉಡಾಫೆಯ ಮಾತನಾಡುತ್ತಾರೆ. ಇಂತಹವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಈ ದೇಶದ ಪ್ರಜೆಯಾಗಿ ನಮ್ಮನ್ನು ಆಳುವ ನಾಯಕರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಮಂಥನ ಮಾಡಬೇಕಿದೆ. ರಜೆ ಸಿಕ್ಕಿದೆ ಎಲ್ಲಿಯಾದರೂ ಜಾಲಿ ಟ್ರಿಪ್ ಹೋಗಿ ಬರೋಣ ಎಂದು ಭಾವಿಸದೆ ಮತವನ್ನು ಹಾಕುವ ಮೂಲಕ ಈ ದೇಶದ ಪ್ರಜೆ ಎನ್ನುವುದನ್ನು ಹೆಮ್ಮೆಯಿಂದ ಹೇಳಬೇಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)