ಚಿಕ್ಕಮಗಳೂರು: ಗಾಳೆ ಮಳೆ ಅಬ್ಬರಕ್ಕೆ ಮಲೆನಾಡು ತತ್ತರಿಸಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದ್ದು, ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದ ವೃದ್ಧೆಯ ಮೃತದೇಹ ಹೇಮಾವತಿ ನದಿಯ ದಡದಲ್ಲಿ ಪತ್ತೆಯಾಗಿದೆ.
ದಾರದಹಳ್ಳಿ ಗ್ರಾಮದ ದೇವಮ್ಮ (61 ) ಮೃತ ಮಹಿಳೆಯಾಗಿದ್ದಾರೆ. ಹೇಮಾವತಿ ನದಿಯ ದಡದಲ್ಲಿ ಸಿಲುಕಿದ ಸ್ಥಿತಿಯಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ.
ಇಂದು ಬೆಳಗ್ಗೆ ಗದ್ದೆಗೆ ತೆರಳುವಾಗ ನದಿಗೆ ಕಾಲು ಜಾರಿ ಬಿದ್ದಿದ್ದರು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಇದೀಗ ಪತ್ತೆಯಾಗಿದೆ.
ರಸ್ತೆಗೆ ಅಡ್ಡಲಾಗಿ ಉರುಳಿದ ಬಿದ್ದ ಮರ:
ಹೊರನಾಡು-ಕೊಟ್ಟಿಗೆಹಾರ ಮಧ್ಯದ ಬಾಳೂರು ಎಸ್ಟೇಟ್ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಹೊರನಾಡು ಸಂಪರ್ಕ ಬಂದ್ ಆಗಿದ್ದು, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ ಹಾಗೂ ಸ್ಥಳೀಯರು ಮಳೆಯ ನಡುವೆಯೇಮರ ತೆರವುಗೊಳಿಸಿದ್ದಾರೆ.
ಮನೆ ಪಕ್ಕದ ತಡೆ ಗೋಡೆ ಕುಸಿತ:
ನಿರಂತರ ಮಳೆಯಿಂದಾಗಿ ಮನೆ ಪಕ್ಕದ ತಡೆ ಗೋಡೆ ಕುಸಿದ ಘಟನೆ ಕಳಸ ತಾಲೂಕಿನ ಓಣಿಗಂಡಿಯಲ್ಲಿ ನಡೆದಿದ್ದು, ಇಲ್ಲಿನ ನಿವಾಸಿ ಡೊಂಗ್ರೆ ಅವರ ಮನೆಯ ಪಕ್ಕದ ತಡೆಗೋಡೆ ಕುಸಿದಿದ್ದು, ಮನೆಯ ಸುತ್ತ ಮುತ್ತಲಿನ ಮಣ್ಣು ನಿಧಾನವಾಗಿ ಕುಸಿಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಮಣ್ಣು ಕುಸಿದಿರುವ ಭಾಗಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಟಾರ್ಪಲ್ ಮುಚ್ಚಿ ಮಣ್ಣು ಕುಸಿಯದಂತೆ ತಡೆಯಲು ಮುಂದಾಗಿದ್ದಾರೆ. ಆದ್ರೆ ಟರ್ಪಾಲ್ ಮಣ್ಣು ಕುಸಿತವನ್ನು ಹೇಗೆ ತಡೆಯುತ್ತದೆ ಅನ್ನೋದೇ ಸವಾಲಾಗಿದೆ. ಇನ್ನು ಎರಡು ಅಡಿ ಮಣ್ಣು ಕುಸಿದ್ರೆ, ಮನೆ ಕೂಡ ಕುಸಿಯುವ ಭೀತಿ ಎದುರಾಗಿದೆ. ಈ ಮನೆಯಲ್ಲಿ ಹೇಗೆ ವಾಸಿಸುವುದು ಎನ್ನುವುದು ತಿಳಿಯದೇ ಮನೆ ಮಂದಿ ಆತಂಕದಲ್ಲಿದ್ದಾರೆ.
ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ಬೃಹತ್ ಮರ:
ಚಿಕ್ಕಮಗಳೂರಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಳೆಯ ಪರಿಣಾಮ ಚಲಿಸುತ್ತಿದ್ದ ಲಾರಿಯೊಂದರ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ನಡೆದಿದೆ.
ಮರ ಬಿದ್ದ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತವಾದ ಕಾರಣ ಭಾರೀ ಅನಾಹುತವೊಂದು ತಪ್ಪಿದ್ದು, ಲಾರಿ ಚಾಲಕ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.