ಮತ್ತೊಮ್ಮೆ ಆಘಾತ..? ಸುಡಾನ್ ನಲ್ಲಿ ಪೂರ್ಣಪ್ರಮಾಣದ ಅಂತರ್ಯುದ್ಧದ ಭೀತಿ

Arun Kumar
0

ತೀವ್ರ ಸಂಘರ್ಷದಿಂದ ಜರ್ಝರಿತಗೊಂಡಿರುವ ಸುಡಾನ್ ಇದೀಗ ಪೂರ್ಣಪ್ರಮಾಣದ ಅಂತರ್ಯುದ್ಧದ ಅಂಚಿನಲ್ಲಿದ್ದು ಇದು ಇಡೀ ವಲಯವನ್ನೇ ಅಸ್ಥಿರಗೊಳಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ರವಿವಾರ ಕನಿಷ್ಟ 22 ಮಂದಿಯ ಸಾವಿಗೆ ಕಾರಣವಾದ ಆಮ್ಡರ್ಮನ್ ನಗರದ ಮೇಲಿನ ವೈಮಾನಿಕ ದಾಳಿಯನ್ನು ಖಂಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಸುಡಾನ್‌ನಲ್ಲಿ ಮಾನವೀಯತೆ ಮತ್ತು ಮಾನವ ಹಕ್ಕು ಕಾಯ್ದೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ.

ಅಲ್ಲಿ ಅಪಾಯಕಾರಿ ಮತ್ತು ಗೊಂದಲದ ಪರಿಸ್ಥಿತಿ ಇದೆ. ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವೆ ಇದೀಗ ನಡೆಯುತ್ತಿರುವ ಯುದ್ಧವು ಪೂರ್ಣ ಪ್ರಮಾಣದ ಅಂತರ್ಯುದ್ದವಾಗಿ ಸ್ಫೋಟಗೊಳ್ಳುವ ಎಲ್ಲಾ ಸಾಧ್ಯತೆಯಿದ್ದು ಇದು ಸಂಪೂರ್ಣ ವಲಯವನ್ನು ಅಸ್ಥಿರಗೊಳಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುಮಾರು 3 ತಿಂಗಳಿಂದ ಮುಂದುವರಿದಿರುವ ಸಂಘರ್ಷದಲ್ಲಿ ಸುಮಾರು 3 ಸಾವಿರ ಮಂದಿ ಹತರಾಗಿದ್ದು ದೌರ್ಜನ್ಯ, ಅತ್ಯಾಚಾರ ಮತ್ತು ಜನಾಂಗೀಯ ಉದ್ದೇಶಿತ ಹತ್ಯೆಗಳು ಹೆಚ್ಚಿವೆ. ದರ್ಫುರ್ ವಲಯದಲ್ಲಿ ವ್ಯಾಪಕ ಗಲಭೆ, ಲೂಟಿ ಮುಂದುವರಿದಿದ್ದು ಮನುಕುಲದ ವಿರುದ್ಧದ ಅಪರಾಧ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಯುದ್ಧ ಆರಂಭವಾದ ದಿನದಿಂದ ಅರೆಸೇನಾ ಪಡೆಯು ಜನವಸತಿ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿ ಅಲ್ಲಿನ ನಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿದೆ ಎಂಬ ಆರೋಪವಿದೆ. ಸುಡಾನ್ ಯುದ್ಧದಿಂದ ಸುಮಾರು 3 ದಶಲಕ್ಷ ಜನತೆ ನೆಲೆಕಳೆದುಕೊಂಡಿದ್ದು ಇವರಲ್ಲಿ ಸುಮಾರು 7 ಲಕ್ಷ ಜನರು ನೆರೆದೇಶಗಳಿಗೆ ಪಲಾಯನ ಮಾಡಿದ್ದಾರೆ.

ಪಶ್ಚಿಮ ದರ್ಫುರ್ ವಲಯದಲ್ಲಿ ಅರೆಸೇನಾ ಪಡೆ ಹಾಗೂ ಅದನ್ನು ಬೆಂಬಲಿಸುತ್ತಿರುವ ಸಶಸ್ತ್ರ ಹೋರಾಟಗಾರರ ತಂಡದಿಂದ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ. ಇಲ್ಲಿ ಸಂಘರ್ಷವು ಜನಾಂಗೀಯ ಆಯಾಮ ಪಡೆಯುವ ಲಕ್ಷಣಗಳಿವೆ ಎಂದು ವಿಶ್ವಸಂಸ್ಥೆ, ಆಫ್ರಿಕನ್ ದೇಶಗಳ ಸಂಘಟನೆ ಎಚ್ಚರಿಕೆ ನೀಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)