Darshan: ರೇಣುಕಾಸ್ವಾಮಿ ಹತ್ಯೆಗೆ ಟ್ವಿಸ್ಟ್, ನಾಲ್ವರು ಆರೋಪಿಗಳು ನಾಪತ್ತೆ

Arun Kumar
0

ಬೆಂಗಳೂರು, ಜೂನ್ 12; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರು ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಹತ್ಯೆ ನಡೆದ ಶೆಡ್ಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಕೋರ್ಟ್ 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಈ ನಡುವೆ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಬೇಕಿದೆ.

ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಜೊತೆ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಇವರೆಲ್ಲರೂ ಸದ್ಯಕ್ಕೆ ನಾಪತ್ತೆ ಆಗಿದ್ದಾರೆ.

ಯಾರು ಆರೋಪಿಗಳು?; ಜಗ್ಗ, ಅನು, ರವಿ, ರಾಜು ಎಂಬ ನಾಲ್ವರು ಆರೋಪಿಗಳು ಯಾರು?, ಯಾರ ಸ್ನೇಹಿತರು? ಎಂಬುದು ಇನ್ನೂ ಖಚಿತವಾಗಿಲ್ಲ. ಈ ಮಾಹಿತಿ ಅನ್ವಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಜೊತೆಗೆ ಅನು ಎಂಬ ಮಹಿಳೆಯ ಕೈವಾಡವೂ ಇದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಜೂನ್ 8ರ ಶನಿವಾರ ಮಧ್ಯಾಹ್ನ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ, ಕೂಡಿ ಹಾಕಿ ಹಲ್ಲೆ, ಹತ್ಯೆ ಮಾಡಿದ ಕಾಮಾಕ್ಷಿಪಾಳ್ಯದ ಶೆಡ್ನಲ್ಲಿ ಬುಧವಾರ ಸ್ಥಳ ಮಹಜರು ಮಾಡಲಾಗಿದೆ. ಈ ಶೆಡ್ ಮಾಲೀಕ ಪಟ್ಟಣಗೆರೆ ವಿನಯ್ ಆರೋಪಿಯಾಗಿದ್ದು, ಪೊಲೀಸರ ವಶದಲ್ಲಿದ್ದಾನೆ.

ದರ್ಶನ್ ಸೇರಿ ಎಲ್ಲಾ 13 ಆರೋಪಿಗಳನ್ನು ಕರೆದುಕೊಂಡು ಬಂದು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಸಮ್ಮುಖದಲ್ಲಿ ಕಾಮಾಕ್ಷಿಪಾಳ್ಯದ ಶೆಡ್ನಲ್ಲಿ ಒಂದೂವರೆ ಗಂಟೆ ಬುಧವಾರ ಸ್ಥಳ ಮಹಜರು ಮಾಡಲಾಗಿದೆ. ಬಳಿಕ ಎಲ್ಲರನ್ನೂ ಪುನಃ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

ಬಂಧನದಲ್ಲಿರುವ ಆರೋಪಿಗಳು

* ನಟ ದರ್ಶನ್
* ಪವಿತ್ರಾ ಗೌಡ
* ದರ್ಶನ್ ಸ್ನೇಹಿತ ವಿ. ವಿನಯ್
* ದರ್ಶನ್ ಮ್ಯಾನೇಜರ್ ಆರ್. ನಾಗರಾಜು
* ಎಂ. ಲಕ್ಷ್ಮಣ್
* ಎಸ್. ಪ್ರದೋಶ್
* ಕೆ. ಪವನ್
* ದೀಪಕ್ ಕುಮಾರ್
* ನಂದೀಶ್
* ಕಾರ್ತಿಕ್
* ನಿಖಿಲ್ ನಾಯಕ್
* ಕೇಶವಮೂರ್ತಿ
* ರಾಘವೇಂದ್ರ

ಆರೋಪಿ ರಾಘವೇಂದ್ರ ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿದ್ದ. ರಾಘವೇಂದ್ರ ಮೂಲಕವೇ ನಟ ದರ್ಶನ್ ರೇಣುಕಾಸ್ವಾಮಿಯನ್ನು ಬೆಂಗಳೂರು ನಗರಕ್ಕೆ ಕರೆಸಿದ್ದಾರೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಿಸಿಕೊಂಡು ಬಂದು ಕಾಮಾಕ್ಷಿಪಾಳ್ಯದ ಶೆಡ್ವೊಂದರಲ್ಲಿ ಕೂಡಿ ಹಾಕಿ, ಹಲ್ಲೆ ಮಾಡಿ ಹತ್ಯೆ ಮಾಡಿ, ಬಳಿಕ ಶವವನ್ನು ಮೋರಿಗೆ ಎಸೆಯಲಾಗಿದೆ ಎಂಬುದು ಆರೋಪ. ರೇಣುಕಾಸ್ವಾಮಿ ಶವವನ್ನು ಸಾಗಣೆ ಮಾಡಲು ಬಳಕೆ ಮಾಡಿದ ಎರಡು ಕಾರುಗಳನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)