ಕ್ರೆಡಿಟ್ ವಿಚಾರದಲ್ಲಿ ಕಾಲ್ ಕೆರ್ಕೊಂಡು ಪರಸ್ಪರ ಜಗಳಕ್ಕೆ ಇಳಿದಿದ್ದ ಇವರಿಬ್ಬರು ಈಗ ಪ್ರತಿಷ್ಠೆಯ ಕಣದಲ್ಲಿ ಇನ್ನೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹಾಗಂಥ ಆ ಕಣ ಚುನಾವಣೆಯದ್ದು ಅಂತ ಅಂದುಕೊಳ್ಳುವಂತೆ ಇಲ್ಲ. ಸಭೆ ಸಮಾರಂಭದಲ್ಲಿ ಇಬ್ಬರು ಎದುರು ಬದುರಾಗುತ್ತಾರೆ ಎಂದು ಊಹಿಸುವಂತೆ ಇಲ್ಲ. ಯಾಕೆಂದರೆ ಇಬ್ಬರು ಪರಸ್ಪರ ಎದುರಾಗುತ್ತಿರುವುದು ಕಿರುತೆರೆಯಲ್ಲಿ.
ಹೌದು. ಇನ್ನೇನು ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿವೆ. ಬೆಳ್ಳಿತೆರೆಯ ಕಥೆ ಗೊತ್ತಿಲ್ಲ. ಆದರೆ ಕಿರುತೆರೆಯಲ್ಲಿ ಆಗ್ಲೇ ಹಬ್ಬದ ವಾತಾವರಣ ಕಳೆಗಟ್ಟಿದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ವಾಹಿನಿಗಳು ಕೂಡ ಟೊಂಕ ಕಟ್ಟಿ ನಿಂತಿವೆ. ತಾವು ಖರೀದಿಸಿರುವ ಸಿನಿಮಾಗಳನ್ನ ಪ್ರಸಾರ ಮಾಡಿ ಭರ್ಜರಿ ಜಾಹೀರಾತು ಪಡೆಯುವ ಪ್ಲಾನುಗಳನ್ನೂ ಕೂಡ ಮಾಡಿಕೊಂಡಿವೆ. ಇದಕ್ಕೆ ಕೈಗನ್ನಡಿ ಎನ್ನುವಂತೆ 'ಜೀ ಕನ್ನಡ' 'ಕಾಟೇರ'ನನ್ನು 'ಯುಗಾದಿ'ಯಂದು ಕಣಕ್ಕಿಳಿಸುತ್ತಿದೆ. ಸಾಲು ಸಾಲು ದಾಖಲೆಗಳೊಂದಿಗೆ ಹೊಸ ಅಧ್ಯಾಯ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ 'ಕಾಟೇರ' ಅತೀ ಶೀಘ್ರದಲ್ಲಿ ಎಂಬ ಪ್ರೋಮೋವನ್ನೂ ಕೂಡ ಹರಿಬಿಟ್ಟಿದೆ. ವಿಶೇಷ ಅಂದರೆ ಅವತ್ತೇ ಅಂದರೆ 'ಯುಗಾದಿ' ಹಬ್ಬದಂದೇ 'ಉದಯ ಟಿವಿ'ಯಲ್ಲಿ 'ಉಪಾಧ್ಯಕ್ಷ' ಪ್ರಸಾರವಾಗಲಿದೆ.
ನಿಜಾ, 'ಉಪಾಧ್ಯಕ್ಷ'ನ ಪ್ರೋಮೋವನ್ನ 'ಉದಯ ಟಿವಿ' ಇನ್ನೂ ಅನಾವರಣಗೊಳಿಸಿಲ್ಲ. ಆದರೆ 'ಕಿರುತೆರೆ'ಯಲ್ಲಿ 'ಕಾಟೇರ' ಪ್ರಸಾರವಾಗುವ ದಿನದಂದೇ, 'ಉಪಾಧ್ಯಕ್ಷ' ಕೂಡ ಪ್ರಸಾರವಾಗಲಿದೆ ಎಂಬ ಮಾತು ಕಿರುತೆರೆಯಲ್ಲಿ ಸದ್ಯಕ್ಕೆ 'ಗುಲ್ಲಾಗಿದೆ'.
ಇನ್ನೂ ನಿಮಗೆ ಗೊತ್ತು ಇದು 'ಟಿ.ಆರ್.ಪಿ' ಯುಗ. ಯಾವ ಚಿತ್ರಕ್ಕೆ ಎಷ್ಟು 'ಟಿ.ಆರ್.ಪಿ' ಬಂತು ಅನ್ನುವ ಕುತೂಹಲ ಅವರ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ. ಹೀಗಾಗಿಯೇ ಯುಗಾದಿಯಂದು 'ಕಾಟೇರ' ಹಾಗೂ 'ಉಪಾಧ್ಯಕ್ಷ' ಮುಖಾಮುಖಿಯಾಗಲಿರುವ ಸುದ್ದಿ ಕೇಳಿ, ಸ್ಮಾಲ್ ಸ್ಕ್ರೀನ್ ಅಂಗಳದಲ್ಲಿಯೂ ಇವೆರಡು ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಎಷ್ಟು 'ಟಿ.ಆರ್.ಪಿ' ಬರಬಹುದು ಎನ್ನುವ ಲೆಕ್ಕಾಚಾರವನ್ನ ಅನೇಕರು ಹಾಕಲು ಶುರುಮಾಡಿದ್ದಾರೆ.
ಇನ್ನೂ ಎಲ್ಲರಿಗೂ ಗೊತ್ತು ಕರ್ನಾಟಕದಲ್ಲಿ ದರ್ಶನ್ ಅತ್ಯುತ್ತಮ ಟಿ.ಆರ್.ಪಿ ಮೆಟೀರಿಯಲ್ಲು. ಅದು ಸ್ವತಃ ದರ್ಶನ್ ಗೂ ಗೊತ್ತಿರುವ ವಿಚಾರ. ಈ ಕಾರಣಕ್ಕೆ 'ಕಾಟೇರ ವರ್ಸಸ್ ಉಪಾಧ್ಯಕ್ಷ'ನ ಈ ಕಿರುತೆರೆಯ ಸಮರ ಅನೇಕರ ಕಣ್ಣಿಗೆ ಈಗ ಕುತೂಹಲದ ಕೇಂದ್ರ ಬಿಂದುವಿನಂತೆ ಕಾಣುತ್ತಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.