ಗೆಹ್ಲೋಟ್ ಜೊತೆಗಿನ ಮುನಿಸು ಅಂತ್ಯವಾಯಿತೇ..? ‘ಒಗ್ಗಟ್ಟಿನ’ ಮಂತ್ರ ಪಠಿಸಿದ ಸಚಿನ್ ಪೈಲಟ್..!

Arun Kumar
0
ರಾಜಸ್ಥಾನದಲ್ಲಿ ಮುನಿಸೊಂದು ಅಂತ್ಯಗೊಂಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ನಿರಾಳಗೊಂಡಿದೆ. ಹೌದು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಮೇರೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಮರೆಯುವುದಾಗಿ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಶನಿವಾರ ಹೇಳಿಕೆ ನೀಡಿದರು.
ಸಾಮೂಹಿಕ ನಾಯಕತ್ವವೇ ವಿಧಾನಸಭೆ ಚುನಾವಣೆಗೆ ಮುಂದಿರುವ ಏಕೈಕ ಮಾರ್ಗ ಎಂದಿದ್ದಾರೆ. ಪಕ್ಷದ ನಿರ್ಣಾಯಕ ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಸಭೆಯ ಕೆಲವೇ ದಿನಗಳಲ್ಲಿ ಪಿಟಿಐಗೆ ವಿಶೇಷ ಸಂದರ್ಶನ ನೀಡಿರುವ ಪೈಲಟ್, ಎಲ್ಲವನ್ನು ಕ್ಷಮಿಸಿ ಹಳೆಯದನ್ನು ಮರೆತು ಮುಂದೆ ಸಾಗಿ ಎಂದು ಖರ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ನನಗಿಂತ ಹಿರಿಯರು. ಅವರಿಗೆ ಹೆಚ್ಚು ಅನುಭವ ಇದೆ. ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ನಾನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನಾನು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ. ಇಂದು ಗೆಹ್ಲೋಟ್ ಮುಖ್ಯಮಂತ್ರಿ. ಆದ್ದರಿಂದ ಅವರು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಸ್ವಲ್ಪ ಆಚೆ ಈಚೆ ಆದರೆ ಅದು ದೊಡ್ಡ ಸಮಸ್ಯೆಯಲ್ಲ. ಯಾಕೆಂದರೆ ಯಾವುದೇ ವ್ಯಕ್ತಿಗಿಂತ ಪಕ್ಷ ಮತ್ತು ಸಾರ್ವಜನಿಕರೇ ಮುಖ್ಯ. ನನಗೂ ಇದು ಅರ್ಥವಾಗಿದೆ ಮತ್ತು ಅವರಿಗೂ ಅರ್ಥವಾಗಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಹಿಂದಿನ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದಂತಹ ವಿಷಯಗಳ ಬಗ್ಗೆ ತನಿಖೆ ನಡೆಸದೇ ಇರುವುದಕ್ಕಾಗಿ ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಪೈಲಟ್, ಆ ಸಮಯ ಕಳೆದು ಹೋಗಿದೆ, ಅದು ಮತ್ತೆ ಬರುವುದಿಲ್ಲ, ನಾವು ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಖರ್ಗೆ ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ.
ಕ್ಷಮಿಸಿ ಬಿಡಿ ಮತ್ತು ಆಗಿ ಹೋದ ವಿಷಯವನ್ನು ಮರೆತುಬಿಡಿ. ಮುಂದಿನ ವಿಷಯಗಳ ಬಗ್ಗೆ ನೋಡಿ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಖರ್ಗೆ ಹೇಳಿದ್ದಾರೆ. ನಾನು ಅದನ್ನು ನಂಬುತ್ತೇನೆ, ನಾವು ಈಗ ಮುಂದೆ ಸಾಗಬೇಕು. ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಈ ದೇಶಕ್ಕೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಬೇಕಾಗಿದೆ. ನಾವು ರಾಜಸ್ಥಾನದ ಜನರ ಆಶೀರ್ವಾದವನ್ನು ಪಡೆಯಬೇಕು. ಅದಕ್ಕಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಮುನ್ನಡೆಯಬೇಕು ಎಂದು ಪೈಲಟ್ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ರಾಜಸ್ಥಾನದ ಎಐಸಿಸಿ ಉಸ್ತುವಾರಿ ಸುಖಜೀಂದರ್ ರಾಂಧವಾ, ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ದೋತಸ್ರಾ, ಅವರು ಮತ್ತು ರಾಜ್ಯದ ಹಲವಾರು ಶಾಸಕರು ಮತ್ತು ಸಚಿವರು ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಕಾರ್ಯತಂತ್ರದ ಸಭೆಯಲ್ಲಿ ಭಾಗವಹಿಸಿದ ನಂತರ ಸಚಿನ್ ಪೈಲಟ್ ಹೇಳಿಕೆ ನೀಡಿದ್ದಾರೆ. ಕಾಲ್ಬೆರಳುಗಳ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಗೆಹ್ಲೋಟ್, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)