2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳನ್ನು ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಜೆಎನ್ ಯುನ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕಿ ಶೆಹ್ಲಾ ರಶೀದ್ ಶೋರಾ ಅವರು ಹಿಂಪಡೆದಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಂಗಳವಾರ ಫೈಸಲ್ ಮತ್ತು ಶೋರಾ ಅವರ ಅರ್ಜಿಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಅರ್ಜಿದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸುವಂತೆ ಸೂಚಿಸಿದೆ.
ಫೈಸಲ್ ಅವರು 2009 ರಲ್ಲಿ ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆ ಯುಪಿಎಸ್ ಸಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮೊದಲ ಬಾರಿ ಸುದ್ದಿಯಾಗಿದ್ದರು. ಹೀಗೆ ಟಾಪರ್ ಆದ ಮೊದಲ ಕಾಶ್ಮೀರಿ ಇವರಾಗಿದ್ದಾರೆ. ಹಲವಾರು ಸರ್ಕಾರಿ ಹುದ್ದೆಗಳ ನಂತರ ಅವರು 2019 ರಲ್ಲಿ ಕಾಶ್ಮೀರದಲ್ಲಿ ನಿರಂತರ ಹತ್ಯೆಗಳನ್ನು ಖಂಡಿಸಿ ಸೇವೆಗೆ ರಾಜೀನಾಮೆ ನೀಡಿದ್ದರು.
ನಂತರ ಅವರು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು. ಕಳೆದ ವರ್ಷ ಇವರು ಸರ್ಕಾರಿ ಸೇವೆಯಲ್ಲಿ ಮರುಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ರಾಜೀನಾಮೆಯನ್ನು ಹಿಂಪಡೆಯಲು ಮುಂದಾದರು. ಅವರ ಅರ್ಜಿಯನ್ನು ಸ್ವೀಕರಿಸಲಾಯಿತು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಶೆಹ್ಲಾ ರಶೀದ್, 2016 ರಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾದ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಾಲಿದ್ ಸೇರಿದಂತೆ ಹಲವಾರು ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.
ಅಂದಹಾಗೆ ಕನ್ಹಯ್ಯಾ ಕುಮಾರ್ ಈಗ ಕಾಂಗ್ರೆಸ್ ನಾಯಕ. ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಖಾಲಿದ್ ಜೈಲಿನಲ್ಲಿದ್ದಾರೆ. ಶೆಹ್ಲಾ ರಶೀದ್ ನಂತರ ಶಾ ಫೈಸಲ್ ಅವರ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.
ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಬಂಧಿಸಲ್ಪಟ್ಟ ಕಾಶ್ಮೀರ ನಾಯಕರಲ್ಲಿ ಫೈಸಲ್ ಕೂಡ ಒಬ್ಬರು. ಆಗಸ್ಟ್ 2020 ರಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್, ಫೈಸಲ್ ಅವರ ಕೋರಿಕೆಯ ಮೇರೆಗೆ ಪಕ್ಷದ ಸದಸ್ಯರಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಘೋಷಿಸಿತು. ಶೆಹ್ಲಾ ರಶೀದ್ ಕೂಡ ಪಕ್ಷ ತೊರೆದಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.