ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮಾರ್ಚ್ 21ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದರಿಂದ ಯುಗಾದಿ ಹಬ್ಬಕ್ಕೆ ಮುನ್ನವೇ ರಾಜ್ಯಾದ್ಯಂತ 23 ಸಾವಿರ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು), ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಸಂಘ, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನೊಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಮ್ಮತದ ನಿರ್ಣಯ ಕೈಗೊಂಡಿದೆ.
ಮುಷ್ಕರದ ಕುರಿತಂತೆ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್‌ನ ಅಧ್ಯಕ್ಷ ಎಚ್‌ವಿ ಅನಂತಸುಬ್ಬರಾವ್, ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್. ಎಸ್, ಮಂಜುನಾಥ್ ”ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವಂತೆ ಹಲವು ಸಲ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಫೆ. 21ರಂದು ನಡೆದ ಅಂಬಾರಿ ಉತ್ಸವ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಧಾನ ಮಂಡಲದ ಅಧಿವೇಶನ ಮುಗಿದ ಕೂಡಲೇ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ,” ಎಂದು ಹೇಳಿದರು.
‘ಸಾರಿಗೆ ಸಚಿವ ಶ್ರೀರಾಮುಲು ಅವರು ಮಾರ್ಚ್ 8ರಂದು ಸಭೆ ಕರೆದು, ಮೂಲ ವೇತನದ ಶೇ 10ರಷ್ಟು ಹೆಚ್ಚಳದ ಭರವಸೆಗೆ ನಾವು ಸಮ್ಮತಿಸಲಿಲ್ಲ. ಈ ಹಿನ್ನೆಲೆಯಲ್ಲಿಎರಡು ದಿನಗಳೊಳಗೆ ಮತ್ತೊಮ್ಮೆ ಸಭೆ ನಡೆಸಿ, ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು. ಆದರೆ, ಈವರೆಗೆ ಸಭೆ ಕರೆದಿಲ್ಲ,” ಎಂದರು.
”ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಸಾರಿಗೆ ನೌಕರರಿಗೆ 2016ರ ಜ. 1ರಿಂದ ಅನ್ವಯವಾಗುವಂತೆ ಶೇ 12.5ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಇದಾಗಿ 3 ವರ್ಷ 3 ತಿಂಗಳು ಕಳೆದರೂ ಸಂಬಳ ಪರಿಷ್ಕರಿಸಿಲ್ಲ. ಕೈಗಾರಿಕಾ ಒಪ್ಪಂದದನ್ವಯ 2020ರ ಜ. 1ರಿಂದ ವೇತನ ಪರಿಷ್ಕರಣೆಯಾಗಬೇಕಿತ್ತು. ಸಾರಿಗೆ ನಿಗಮಗಳ ಆಡಳಿತ ವರ್ಗದ ನೀತಿಗಳಿಂದಾಗಿ ಎಲ್ಲ ನಿಗಮಗಳು ನಷ್ಟದಲ್ಲಿವೆಯೇ ಹೊರತು ಅಧಿಕಾರಿ, ನೌಕರರ ಕೆಲಸದಿಂದ ಅಲ್ಲ,” ಎಂದು ತಿಳಿಸಿದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.