Ganeshotsava Controversy: ಮಲ್ಲೇಶ್ವರದಲ್ಲಿ ಶಾಸಕ ಮುನಿರತ್ನ ವಿರುದ್ಧ ಸ್ಥಳೀಯರ ಆಕ್ರೋಶ
ಅನ್ನದಾನ ಮಾಡುತ್ತಿದ್ದವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪ; ಕಾರಿಗೆ ಸ್ಥಳೀಯರು ಮುತ್ತಿಗೆ, ವೈಯಾಲಿಕಾವಲ್ ಠಾಣೆಗೆ ದೂರು
- ಮಲ್ಲೇಶ್ವರದಲ್ಲಿ ಗಣೇಶೋತ್ಸವದ ವೇಳೆ ಅನ್ನದಾನ ಮಾಡುತ್ತಿದ್ದವರನ್ನು ಶಾಸಕ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಸ್ಥಳೀಯರು ಶಾಸಕರ ಕಾರಿನ ಬಳಿ ಜಮಾಯಿಸಿದ್ದು, ಈ ಸಂಬಂಧ
ಬೆಂಗಳೂರು: ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಶಾಸಕ ಮುನಿರತ್ನ ಅವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಲ್ಲೇಶ್ವರದಲ್ಲಿ ಚಂದ್ರಶೇಖರ್ ನಾಯ್ಡು ಅವರ ನೇತೃತ್ವದಲ್ಲಿ ಗಣೇಶೋತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕಾರ್ಯಕ್ರಮ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಕಾರ್ಯಕ್ರಮದ ವೇಳೆ ಸ್ಥಳಕ್ಕೆ ಬಂದಿದ್ದ ಶಾಸಕ ಮುನಿರತ್ನ ಅವರು ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ಗಣೇಶೋತ್ಸವದ ಅಂಗವಾಗಿ ಅನ್ನದಾನ ಮಾಡುತ್ತಿದ್ದವರನ್ನು ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಮಾತಿನ ವಿಚಾರಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಕೆಲಕಾಲ ಬಿಗುವಿಗೆ ತಿರುಗಿದೆ ಎನ್ನಲಾಗಿದೆ. ಬಳಿಕ ಮುನಿರತ್ನ ಅವರ ಕಾರಿನ ಸುತ್ತ ಸ್ಥಳೀಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರಿಗೆ ದೂರು
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಗಣೇಶೋತ್ಸವ ನಡೆಸುವುದು ಹಾಗೂ ಅನ್ನದಾನ ಕಾರ್ಯಕ್ರಮ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಅನುಮತಿ, ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಕಾರ್ಯಕ್ರಮದ ವೇಳೆ ನಡೆದ ಮಾತಿನ ಚಕಮಕಿ ಸೇರಿದಂತೆ ಹಲವು ವಿಚಾರಗಳು ಇದೀಗ ಚರ್ಚೆಗೆ ಬಂದಿವೆ.
ಈ ಪ್ರಕರಣದಲ್ಲಿ ಸ್ಥಳೀಯರು ಮಾಡಿರುವ ಆರೋಪಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕಿದ್ದು, ಶಾಸಕರ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಬಂದ ಬಳಿಕ ಪ್ರಕರಣದ ಮತ್ತಷ್ಟು ವಿವರಗಳು ಸ್ಪಷ್ಟವಾಗಲಿವೆ.
ಹಾಗೆ ಇವೆಲ್ಲ ಆರೋಪಗಳ ಸತ್ಯಾ ಸತ್ಯತೆ ಪೊಲೀಸರ ತನಿಖೆ ಬಳಿಕ ತಿಳಿಯುತ್ತದೆ, ಆದ್ರೂ ಜನ ಪ್ರತಿನಿಧಿ ಎನಿಸಿಕೊಂಡ ಇವರು ಸ್ವಲ್ಪ ಇಂಥ ವಿಚಾರಗಳಲ್ಲಿ ಗಮನ ಹರಿಸಬೇಕು ಎಂದು ವೈರಲ್ ಆಗುತ್ತಿರುವ ವಿಡಿಯೋ ಕಾಮೆಂಟ್ಗಳಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.





Comments
Comments are reviewed by our desk before they appear. Sign in with your mobile number to join the discussion.