ರಸ್ತೆ ಬದಿ, ಡಿವೈಡರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆಳೆಸಿರುವ ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸುವಂತೆ ಪರಿಸರ ಮಂಜುನಾಥ್ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಿದ್ದಾರೆ.
ಕೋನೋಕಾರ್ಪಸ್ ಗಿಡಗಳಿಂದ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರಕ್ಕೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಮಕ್ಕಳು, ವೃದ್ಧರಲ್ಲಿ ಅಲರ್ಜಿ, ಅಸ್ತಮಾ, ನೆಗಡಿ, ಉಸಿರಾಟದ ಸಮಸ್ಯೆ ಹೆಚ್ಚುತ್ತಿವೆ.
ಗಿಡಗಳು ಹೆಚ್ಚು ನೀರು ಹೀರಿಕೊಳ್ಳುವುದರಿಂದ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬೇರುಗಳು ವ್ಯಾಪಕವಾಗಿ ಹರಡುವುದರಿಂದ ರಸ್ತೆ, ಪಾದಚಾರಿ ಮಾರ್ಗ, ನೀರಿನ ಪೈಪ್‌ಲೈನ್ ಹಾಗೂ ಕಟ್ಟಡಗಳ ತಳಪಾಯಕ್ಕೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಗಮನ ಸೆಳೆಯಲಾಗಿದೆ.
ಹಸಿರು ವಾತಾವರಣ ನಿರ್ಮಾಣದಲ್ಲಿ ಸ್ಥಳೀಯವಾಗಿ ಹೊಂದಿಕೊಳ್ಳುವ ದೇಶಿ ಜಾತಿಯ ಮರ ಹಾಗೂ ಸಸ್ಯಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ತೆರವುಗೊಳಿಸುವ ಸ್ಥಳದಲ್ಲೇ ಸ್ಥಳೀಯ ಜಾತಿಯ ಪರಿಸರ ಸ್ನೇಹಿ ಗಿಡಗಳನ್ನು ನೆಟ್ಟು ಪೋಷಿಸಲು ಸ್ಥಳೀಯರು, ಪಾಲಿಕೆ ಹಾಗೂ ಇಲಾಖೆಗಳೊಂದಿಗೆ ಕೈಜೋಡಿಸಲು ಮಂಜುನಾಥ ಸಿದ್ಧ ಎಂದಿದ್ದಾರೆ.